ಚಾಮರಾಜನಗರ: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಇ-ಶ್ರಮ್ ಪೋರ್ಟಲ್‌ನಲ್ಲಿ ನೋಂದಾಯಿತ ಕಾರ್ಮಿಕರಿಗೆ ಆದ್ಯತಾ ಪಡಿತರ ಚೀಟಿ ಪಡೆಯಲು ಅರ್ಹರಿರುವ 2567 ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 2567 ವಲಸಿಗ ಕಾರ್ಮಿಕರಿಗೆ ಪಡಿತರ ಚೀಟಿ ನೀಡಲು ಬಾಕಿ ಇದ್ದು ಚಾಮರಾಜನಗರ ತಾಲೂಕಿನಲ್ಲಿ 1017, ಗುಂಡ್ಲುಪೇಟೆ ತಾಲೂಕಿನಲ್ಲಿ 353, ಹನೂರು ತಾಲೂಕಿನಲ್ಲಿ 547, ಕೊಳ್ಳೇಗಾಲ ತಾಲೂಕಿನಲ್ಲಿ 565, ಯಳಂದೂರು ತಾಲೂಕಿನಲ್ಲಿ 85 ವಲಸಿಗ ಕಾರ್ಮಿಕರಿಗೆ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತದೆ.
ಈಗಾಗಲೇ ವಲಸಿಗ ಕಾರ್ಮಿಕರು ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ನವೆಂಬರ್ 10ರವರೆಗೆ ಅರ್ಜಿ ಸಲ್ಲಿಸಬಹುದು. ವಲಸಿಗ ಕಾರ್ಮಿಕರು ಹತ್ತಿರದ ಸಿಎಸ್‌ಸಿ, ಗ್ರಾಮ ಒನ್ ಮತ್ತು ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಿ, ಅರ್ಜಿಯ ಜೊತೆ ತಾಲ್ಲೂಕು ಕಚೇರಿಯ ಆಹಾರ ಶಾಖೆಗೆ ನೀಡಿ ಪಡಿತರ ಚೀಟಿಯನ್ನು ಪಡೆಯಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಯೋಗಾನಂದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.