

ಆನಂದ ಅಂಗಡಿ ಹುಬ್ಬಳ್ಳಿ
ಪಡಿತರ ಚೀಟಿ ಇಲ್ಲದ ಧಾರವಾಡ ಜಿಲ್ಲೆಯ 7,975 ಜನರಿಗೆ ಉಚಿತ ಅಕ್ಕಿ ವಿತರಿಸಲು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಮುಂದಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬಡ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಪಡಿತರ ಚೀಟಿ ಇಲ್ಲದವರಿಗೂ ಆಹಾರ ಧಾನ್ಯ ವಿತರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಘೊಷಿಸಿದ್ದರು.
ಪಡಿತರ ಚೀಟಿ ಇಲ್ಲದ ಹಾಗೂ ಪಡಿತರ ಚೀಟಿ ಪಡೆಯಲು ಅರ್ಜಿ ಸಲ್ಲಿಸಿದವರಿಗೆ ಆಹಾರ ಧಾನ್ಯ ವಿತರಿಸುವಂತೆ ಇದೀಗ ಸರ್ಕಾರ ಸೂಚಿಸಿದೆ. ಧಾರವಾಡ ಜಿಲ್ಲೆಯಲ್ಲಿ ಪಡಿತರ ಚೀಟಿಗಾಗಿ 2018-19 ರಲ್ಲಿ 873 ಹಾಗೂ 2019-20ರಲ್ಲಿ 7,102 ಜನರು ಅರ್ಜಿ ಸಲ್ಲಿಸಿದ್ದರು. ಆದರೆ, ಇವರಿಗೆ ಕಾರಣಾಂತರಗಳಿಂದ ಪಡಿತರ ಚೀಟಿ ತಲುಪಿರಲಿಲ್ಲ. ಹೀಗಾಗಿ ಇವರಿಗೆ ಸರ್ಕಾರ ನೀಡುತ್ತಿರುವ 2 ತಿಂಗಳ ಪಡಿತರ ಧಾನ್ಯ ಪಡೆಯಲು ಆಗಿರಲಿಲ್ಲ. ಇವರಿಗೆ ಪ್ರತಿ ತಿಂಗಳು ಒಂದು ಕುಟುಂಬಕ್ಕೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತದೆ.
ಪಡಿತರ ಚೀಟಿ ಪಡೆಯುವುದಕ್ಕಾಗಿ ಅರ್ಜಿಯೊಂದಿಗೆ ಸಲ್ಲಿಸಿರುವ ಆಧಾರ್ ಕಾರ್ಡ್ನೊಂದಿಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಗೆ ಪಡಿತರ ವಿತರಿಸುವ ದಿನ, ನ್ಯಾಯಬೆಲೆ ಅಂಗಡಿಯ ವಿವರದ ಸಂದೇಶ ಕಳುಹಿಸಲಾಗುತ್ತದೆ. ಮೊಬೈಲ್ಗೆ ಸಂದೇಶ ಪಡೆದ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿರುವ ಜನರು ಸಮೀಪದ ಯಾವುದಾದರೂ ನ್ಯಾಯ ಬೆಲೆ ಅಂಗಡಿಯಲ್ಲಿ ಉಚಿತ ಅಕ್ಕಿ ಪಡೆಯಬಹುದಾಗಿದೆ.
ಪ್ರತಿ ತಿಂಗಳೂ 10 ಕೆಜಿ: ಧಾರವಾಡ ನಗರ ಪ್ರದೇಶದ 2,356, ಧಾರವಾಡ ಗ್ರಾಮೀಣದ 1,251, ಹುಬ್ಬಳ್ಳಿ ನಗರದ 2,175, ಹುಬ್ಬಳ್ಳಿ ಗ್ರಾಮೀಣದ 559, ಕಲಘಟಗಿ ತಾಲೂಕಿನ 362, ಕುಂದಗೋಳ ತಾಲೂಕಿನ 1,047 ಹಾಗೂ ನವಲಗುಂದ ತಾಲೂಕಿನ 225 ಜನರು ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇವರೆಲ್ಲ ಇನ್ನು ಪ್ರತಿ ತಿಂಗಳೂ 10 ಕೆಜಿ ಅ್ಕ ಪಡೆಯಲಿದ್ದಾರೆ.
ಪಡಿತರ ಚೀಟಿ ಇಲ್ಲದ ಹಾಗೂ ಈಗಾಗಲೇ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 10 ಕೆಜಿಯಂತೆ ಅಕ್ಕಿ ನೀಡಲು ಸರ್ಕಾರದಿಂದ ಸೂಚನೆ ಬಂದಿದೆ. ಅಂಥವರಿಗೆ ಮೊಬೈಲ್ ಸಂದೇಶ ನೀಡಿ ಮಾಹಿತಿ ನೀಡಲಾಗುವುದು. ಒಟಿಪಿ ಆಧಾರದ ಮೇಲೆ ಪಡಿತರ ವಿತರಿಸಲಾಗುವುದು.| ಸದಾಶಿವ ಮರ್ಜಿಉಪ ನಿರ್ದೇಶಕರು, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ಧಾರವಾಡ