ಪಡಿತರ ಅಕ್ಕಿ ದುರ್ಬಳಕೆ ಸಲ್ಲದು: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್

kdp
Published on

ಮೈಸೂರು: ಪಡಿತರ ವ್ಯವಸ್ಥೆಯಡಿ ವಿತರಣೆಯಾಗುವ ಅಕ್ಕಿ ದುರ್ಬಳಕೆಯಾಗದಂತೆ ಕ್ರಮ ವಹಿಸಬೇಕು. ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ ಮೇಲೆ ನಿರಂತರವಾಗಿ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಜಯರಾಮ್ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದರು.
ನ್ಯಾಯಬೆಲೆ ಅಂಗಡಿಯಿಂದ ಪಡಿತರದಾರರ ಬದಲಿಗೆ ಬೇರೆ ಕಡೆಗೆ ಅಕ್ಕಿ ಇನ್ನಿತರ ಪದಾರ್ಥ ಹೋಗುತ್ತಿದೆಯೇ? ಕಾಳಸಂತೆ ಅಥವಾ ಹೆಚ್ಚಿನ ದರಕ್ಕೆ ಮಾರಾಟ ಮಾಡಲಾಗುತ್ತಿದೆಯೇ? ಎಂಬುದರ ಕುರಿತು ನಿಗಾ ವಹಿಸಬೇಕು. ಅಂಗಡಿಗಳಿಗೆ ಭೇಟಿ ನೀಡಿ ಪಡಿತರ ದಾಸ್ತಾನು, ವಿತರಣೆಯೊಂದಿಗೆ ದರ, ತೂಕ ಕುರಿತು ಪರಿಶೀಲನೆ ಮಾಡಬೇಕು ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಕುಮುದಾ, ಕರ್ತವ್ಯಲೋಪ ಎಸಗಿರುವ 39 ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕ್ರಮ ಜರುಗಿಸಲಾಗಿದೆ. ಇದರಲ್ಲಿ 18 ಅಂಗಡಿಗಳ ಪರವಾನಗಿ ರದ್ದುಗೊಳಿಸಲಾಗಿದೆ. 21 ಅಂಗಡಿಗಳಿಗೆ ನೋಟಿಸ್ ನೀಡಲಾಗಿದೆ. ಒಂದು ಅಂಗಡಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವಿವರಿಸಿದರು.

ಹಾಸ್ಟೆಲ್‌ಗೆ ಭೇಟಿ ನೀಡಿ ವರದಿ ಕೊಡಿ:
ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಬರುವ ಹಾಸ್ಟೆಲ್‌ಗಳಲ್ಲಿ ಆಹಾರ ಗುಣಮಟ್ಟ ಮತ್ತು ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಬೇಕು. ಎಲ್ಲ ನೋಡಲ್ ಅಧಿಕಾರಿಗಳು ಮತ್ತು ಇಲಾಖಾಧಿಕಾರಿಗಳು ಹಾಸ್ಟೆಲ್‌ಗಳಿಗೆ ಭೇಟಿ ನೀಡಬೇಕು. ಬಳಿಕ ಈ ಕುರಿತು ವರದಿ ಸಲ್ಲಿಸಬೇಕು ಎಂದು ಉಸ್ತುವಾರಿ ಕಾರ್ಯದರ್ಶಿ ಸೂಚಿಸಿದರು.

ಪೋಡಿ ಕೆಲಸ ಮಾಡಿಕೊಡಿ:
ಜಿಲ್ಲೆಯಲ್ಲಿ ರೈತರು ಪೋಡಿಗಾಗಿ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಅರ್ಜಿ ವಿಲೇವಾರಿ ಮಾಡುತ್ತಿಲ್ಲ ಎಂಬ ದೂರುಗಳು ಬಂದಿವೆ. ಪೋಡಿ ಕೆಲಸವೆಂದರೆ ರೈತರು ಮರುಹುಟ್ಟು ಪಡೆದಂತಾಗುತ್ತದೆ ಎಂದು ಹೇಳುತ್ತಾರೆ. ಅಧಿಕಾರಿಗಳು ಈ ವಿಚಾರದಲ್ಲಿ ನಿರ್ಲಕ್ಷೃ ಮಾಡಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ನೆಡುತೋಪು ಕೆಲಸ ನಿಧಾನ:
ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿಗಳು ವರ್ಷದಲ್ಲಿ ಕೇವಲ 78 ಹೆಕ್ಟೇರ್‌ನಲ್ಲಿ ನೆಡುತೋಪು ಮಾಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಉಸ್ತುವಾರಿ ಕಾರ್ಯದರ್ಶಿ ಜಯರಾಮ್, ಇಲಾಖೆಯಲ್ಲಿ 58 ಸಿಬ್ಬಂದಿ ಇಟ್ಟುಕೊಂಡು ಕೇವಲ 78 ಹೆಕ್ಟೇರ್‌ನಲ್ಲಿ ನೆಡುತೋಪು ಮಾಡಿರುವುದು ಸರಿಯಲ್ಲ. ಎಲ್ಲ ಗ್ರಾಪಂಗಳಿಗೂ ತೆರಳಿ ಅಗತ್ಯವಿರುವ ಕಡೆ ಎಂ-ನರೇಗಾ ಯೋಜನೆಯಡಿ ಗಿಡ ನೆಡುವಂತೆ ತಿಳಿಸಬೇಕು ಎಂದು ಸೂಚಿಸಿದರು.


ಡೆಂೆ ಭೀತಿ:

ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಚ್.ಪ್ರಸಾದ್ ಮಾತನಾಡಿ, ಜಿಲ್ಲೆಗೆ ಡೆಂೆ ಭೀತಿ ಎದುರಾಗಿದೆ. ಮೈಸೂರು ನಗರ ಮತ್ತು ಪಿರಿಯಾಪಟ್ಟಣ ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳು ಕಂಡುಬಂದಿವೆ. ರೋಗಿಗಳ ಚಿಕಿತ್ಸೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಕರೊನಾ ಸೋಂಕಿನ ಪ್ರಕರಣ ನಿಯಂತ್ರಣದಲ್ಲಿದ್ದರೂ ಕೋವಿಡ್ ಲಸಿಕೆ ವಿತರಣೆಯಲ್ಲಿ ಗುರಿ ಸಾಧಿಸಲಾಗಿದೆ ಎಂದು ತಿಳಿಸಿದರು.

ಜ್ಯೋತಿ ಭತ್ತಕ್ಕೆ ಬೇಡಿಕೆ:
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಎಸ್.ಚಂದ್ರಶೇಖರ್ ಮಾತನಾಡಿ, ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಶೇ.55ರಷ್ಟು ಹೆಚ್ಚು ಮಳೆ ಸುರಿದಿದೆ. 15 ದಿನಗಳಿಂದ ಸಬ್ಸಿಡಿಯಲ್ಲಿ ಭತ್ತ, ರಾಗಿ ಬಿತ್ತನೆ ಬೀಜ ವಿತರಣೆ ಮಾಡಲಾಗುತ್ತಿದೆ. ಜ್ಯೋತಿ ತಳಿಯ ಭತ್ತಕ್ಕೆ ರೈತರಿಂದ ಬೇಡಿಕೆ ಇದೆ. ಕಳೆದ ವರ್ಷ 4 ಸಾವಿರ ಕ್ವಿಂಟಾಲ್ ಬೀಜ ವಿತರಿಸಲಾಗಿತ್ತು. ಈ ಬಾರಿ 7 ಸಾವಿರ ಕ್ವಿಂಟಾಲ್‌ಗೆ ಬೇಡಿಕೆ ಇದೆ ಎಂದರು.
ಕ್ವಿಂಟಾಲ್ ಜ್ಯೋತಿ ಭತ್ತಕ್ಕೆ 2,200 ರೂ. ನೀಡಿ ವ್ಯಾಪಾರಸ್ಥರು ಖರೀದಿ ಮಾಡಿದ್ದರಿಂದ ಹೆಚ್ಚಿನ ರೈತರು ಈ ಭತ್ತ ಬಿತ್ತನೆ ಮಾಡಲು ಉತ್ಸುಕರಾಗಿದ್ದಾರೆ. ಜತೆಗೆ, ಇತರ ಭತ್ತವನ್ನು ಬೆಳೆಯುವಂತೆ ಅರಿವು ಮೂಡಿಸಲಾಗಿದೆ. ಆದರೂ ಜ್ಯೋತಿ ತಳಿಯ ಭತ್ತದ ಬಿತ್ತನೆ ಬೀಜದ ಕೊರತೆ ಇದೆ ಎಂದು ತಿಳಿಸಿದರು.
ನರೇಗಾದಿಂದ ಕೃಷಿ ಇಲಾಖೆಗೆ 3.23 ಲಕ್ಷ ಮಾನವ ದಿನ ಗುರಿ ನಿಗದಿಪಡಿಸಲಾಗಿದೆ. 87,605 ಮಾನವ ದಿನದ ಕೆಲಸ ನೀಡಿದ್ದು, ಶೇ.22 ಪ್ರಗತಿಯಾಗಿದೆ. ಜೂನ್‌ನಲ್ಲಿ ಮಳೆಯಿಲ್ಲದ ವೇಳೆ ಕೆಲಸ ನಡೆದಿದೆ. ಜುಲೈನಲ್ಲಿ ವ್ಯಾಪಕ ಮಳೆಯಾಗಿದ್ದರಿಂದ ನರೇಗಾದಡಿ ಕೆಲಸ ನಿರ್ವಹಿಸಲಾಗಿಲ್ಲ ಎಂದು ಹೇಳಿದರು. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ರೆಡ್ಡಿ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ದಸರಾ ನೆಪ ಹೇಳಬೇಡಿ: ಜಿಲ್ಲಾಧಿಕಾರಿ ತಾಕೀತು
ದಸರಾ ಉತ್ಸವದ ನೆಪ ಹೇಳಿ ಜನಸಾಮಾನ್ಯರ ಕೆಲಸ ಮಾಡುವಲ್ಲಿ ನಿರ್ಲಕ್ಷೃ ತೋರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಎಚ್ಚರಿಸಿದರು.

ದಸರಾ ವೇಳೆ ಡಿಸಿ ಕಚೇರಿ, ಪಾಲಿಕೆ, ಮುಡಾ ಹೊರತುಪಡಿಸಿ ಉಳಿದ ಇಲಾಖೆ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ ಇರಲ್ಲ. ಹೀಗಾಗಿ ತಮ್ಮ ಇಲಾಖೆ ವ್ಯಾಪ್ತಿಯ ಕೆಲಸಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು. ಒಂದು ವೇಳೆ ಅಧಿಕಾರಿಗಳು ನಿರ್ಲಕ್ಷೃ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಯಾರೂ ಇದಕ್ಕೆ ಅವಕಾಶ ಮಾಡಿಕೊಡಬೇಡಿ. ತಮ್ಮ ವ್ಯಾಪ್ತಿಯ ಕೆಲಸವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಹೇಳಿದರು.

ದಸರಾ ಸಂದರ್ಭ ಮೂರು ತಿಂಗಳ ಕಾಲ ಜನಸಾಮಾನ್ಯರ ಯಾವುದೇ ಕೆಲಸಗಳು ನಡೆಯಲ್ಲ. ಪ್ರಶ್ನಿಸಿದರೆ ದಸರಾ ನೆಪ ಹೇಳುತ್ತಾರೆ ಎಂಬ ದೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆಯಾಗಿದೆ. ಜಿಲ್ಲಾಧಿಕಾರಿ ಕಚೇರಿ, ಪಾಲಿಕೆ, ಮುಡಾ ಹಾಗೂ ಮೈಸೂರು ತಹಸೀಲ್ದಾರ್‌ರನ್ನು ಹೊರತುಪಡಿಸಿ ಉಳಿದ ಅಧಿಕಾರಿಗಳು ಎಂದಿನಂತೆ ದಸರಾ ವೇಳೆಯೂ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net