

ಗುಂಡ್ಲುಪೇಟೆ: ಸರ್ಕಾರ ಉಚಿತವಾಗಿ ನೀಡುತ್ತಿರುವ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಮಾಲು ಸಮೇತ ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ನಂಜನಗೂಡು ಪಟ್ಟಣದ ನಿವಾಸಿ ಇಮ್ರಾನ್(30) ಬಂಧಿತ ಆರೋಪಿ. ಶುಕ್ರವಾರ ಸಂಜೆ ಪಟ್ಟಣದ ಹೊರವಲಯದಲ್ಲಿ ಗಸ್ತಿನಲ್ಲಿದ್ದ 112 ಪೊಲೀಸರು ಅನುಮಾನಾಸ್ಪದವಾಗಿ ಹೋಗುತ್ತಿದ್ದ ಪಿಕಪ್ ವಾಹನವನ್ನು ತಡೆದು ಪರಿಶೀಲಿಸಿದಾಗ ಆರೋಪಿಯು ಅಕ್ರಮವಾಗಿ 20 ಚೀಲಗಳಲ್ಲಿ ಪಡಿತರ ಅಕ್ಕಿ ಸಾಗಿಸುತ್ತಿದ್ದುದು ಕಂಡು ಬಂದಿದೆ. ಪಟ್ಟಣದಲ್ಲಿ ಕಡಿಮೆ ಬೆಲೆಗೆ ಖರೀದಿಸಿದ ಅನ್ನ ಭಾಗ್ಯ ಅಕ್ಕಿಯನ್ನು ಮೈಸೂರಿಗೆ ಕೊಂಡೊಯ್ಯುತ್ತಿರುವುದಾಗಿ ಆರೋಪಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.