

ಧಾರವಾಡ: ಮನೆಯ ಪಡಸಾಲೆಯಲ್ಲಿ ಏಕಾಏಕಿ ಭೂಕುಸಿತವಾದ ವಿಚಿತ್ರ ಘಟನೆ ನಗರದ ಮುರುಘಾಮಠ ಬಳಿಯ ತೋಟಗೇರ ಓಣಿಯಲ್ಲಿ ಭಾನುವಾರ ಸಂಭವಿಸಿದೆ.
ನಾಗಮ್ಮ ಸಾರಯ್ಯನವರ ಎಂಬುವರ ಮನೆಯಲ್ಲಿ ಭೂಕುಸಿತವಾಗಿದ್ದು, ಕುಟುಂಬದವರು ಗಾಬರಿಗೊಳ್ಳುವಂತಾಗಿದೆ. ಪಡಸಾಲೆಯ ಗೋಡೆಯ ಪಕ್ಕದಲ್ಲಿ ಮಂಚ ಹಾಗೂ ರಾಟೆ ಇಡಲಾಗಿತ್ತು. ಮಧ್ಯಾಹ್ನ ಏಕಾಏಕಿ ಕುಸಿಯಿತು. ಗೋಡೆಯ ಕೆಳಭಾಗದ ಮಣ್ಣು ಕೆಳಕ್ಕೆ ಹೋಗಿದೆ. ಸುಮಾರು 6 ಅಡಿಯಷ್ಟು ಆಳವಾಗಿದ್ದು, ಗೋಡೆಯೂ ಬೀಳುವ ಆತಂಕ ಉಂಟಾಗಿದೆ.
ಪಡಸಾಲೆಯ ಕಂದಕದಲ್ಲಿ ನೀರಿನ ಸೆಲೆ ಬರುತ್ತಿದ್ದು, ಸಾರಯ್ಯನವರ ಕುಟುಂಬಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ. ಸಂಜೆವರೆಗೂ ಮೋಟರ್ ಅಳವಡಿಸಿ ನೀರು ಹೊರಹಾಕುವಲ್ಲಿ ನಿರತರಾಗಿದ್ದರು. ಈ ಕುರಿತು ಮಹಾನಗರ ಪಾಲಿಕೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಸೋಮವಾರ ಪರಿಶೀಲಿಸುವುದಾಗಿ ತಿಳಿಸಿದ್ದಾರೆ ಎಂದು ನಾಗಮ್ಮ ಪ್ರತಿಕ್ರಿಯಿಸಿದರು.</