70831 ಪಡಿತರ ಚೀಟಿಗಳ ಬ್ಯಾಂಕ್ ಖಾತೆ ಸಮಸ್ಯೆ

new
ಸಾಂದರ್ಭಿಕ ಚಿತ್ರ
Published on

ತುಮಕೂರು: ಜಿಲ್ಲೆಯಲ್ಲಿ ಸಕ್ರಿಯವಾಗಿರುವ 66,1625 ಪಡಿತರ ಚೀಟಿಗಳ ಪೈಕಿ ಆಧಾರ್ ಸಂಖ್ಯೆಯೊಂದಿಗೆ ಬ್ಯಾಂಕ್ ಖಾತೆ ಲಿಂಕ್ ಮಾಡಿರುವ 5,29,515 ಪಡಿತರ ಚೀಟಿಗಳಿಗೆ 30.42ಕೋಟಿ ರೂ. ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. 70,831 ಪಡಿತರ ಚೀಟಿಗಳ ಖಾತೆ ಸಮಸ್ಯೆ ಇರುವ ಪಡಿತರ ಚೀಟಿದಾರರಿದ್ದಾರೆ. ಇವರೆಲ್ಲರಿಗೂ ಬ್ಯಾಂಕ್ ಖಾತೆ ಸಕ್ರಿಯಗೊಳಿಸಲು ಆಹಾರ ಇಲಾಖೆ ಸೂಚಿಸಿದೆ. ಫಲಾನುಭವಿಗಳಿಗೆ ಪ್ರತಿ ತಿಂಗಳು ಹೆಚ್ಚುವರಿಯಾಗಿ ವಿತರಿಸಲಾಗುವ 5ಕೆ.ಜಿ. ಆಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ 34ರೂ. ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗುವುದು.

ಆದ್ಯತಾ ಪಡಿತರ ಚೀಟಿ ಪ್ರತಿ ಫಲಾನುಭವಿಗೆ 5ಕೆಜಿ ಅಕ್ಕಿ ಬದಲಾಗಿ 170 ಹಾಗೂ ಅಂತ್ಯೋದಯ ಅನ್ನಯೋಜನೆ ಪಡಿತರ ಚೀಟಿ ಹೊಂದಿರುವ ಕುಟುಂಬದಲ್ಲಿ 3 ಅಥವಾ 3ಕ್ಕಿಂತ ಕಡಿಮೆ ಸದಸ್ಯರಿರುವ ಕುಟುಂಬ 35 ಕೆ.ಜಿ. ಆಹಾರಧಾನ್ಯ ಪಡೆಯುತ್ತಿರುವುದರಿಂದ ಅಂತಹ ಅಂತ್ಯೋದಯ ಅನ್ನ ಯೋಜನೆಯ ಪಡಿತರ ಚೀಟಿ ಕುಟುಂಬಗಳಿಗೆ ನಗದು ಸೌಲಭ್ಯ ನೀಡಲಾಗುತ್ತಿಲ್ಲ. ಅಂತ್ಯೋದಯ ಪಡಿತರ ಚೀಟಿಯ ಕುಟುಂಬದಲ್ಲಿ 4 ಸದಸ್ಯರಿದ್ದರೆ ಕುಟುಂಬಕ್ಕೆ 170ರೂ., 5 ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ 510ರೂ., 6 ಸದಸ್ಯರನ್ನು ಹೊಂದಿರುವ ಕುಟುಂಬಕ್ಕೆ 850 ರೂ. ನೀಡಲಾಗುತ್ತದೆ. ಹೆಚ್ಚಿನ ಸದಸ್ಯರಿದ್ದಲ್ಲಿ ಇದೇ ರೀತಿಯ ಅನುಪಾತ ಮುಂದುವರಿಯಲಿದೆ.

ಕಳೆದ ಮೂರು ತಿಂಗಳಿನಲ್ಲಿ ಪಡಿತರ ಆಹಾರಧಾನ್ಯ ಪಡೆದುಕೊಂಡಿರುವ ಕುಟುಂಬಗಳು ನಗದು ವರ್ಗಾವಣೆಯ ಸೌಲಭ್ಯ ಪಡೆಯಲು ಅರ್ಹರು. ಪಡಿತರ ಚೀಟಿಯಲ್ಲಿ ಕುಟುಂಬ ಮುಖ್ಯಸ್ಥರನ್ನು ಹೊಂದಿರದ ಅಥವಾ ಒಂದಕ್ಕಿಂತ ಹೆಚ್ಚು ಮುಖ್ಯಸ್ಥರನ್ನು ಹೊಂದಿರುವ ಪಡಿತರ ಚೀಟಿಗಳನ್ನು ನಗದು ವರ್ಗಾವಣೆ ಸೌಲಭ್ಯದಿಂದ ಹೊರಗಿಡಲಾಗಿದೆ. ಈ ಸಮಸ್ಯೆಗಳಿದ್ದರೆ ಆಯಾ ತಾಲೂಕು ತಹಸೀಲ್ದಾರ್ ಕಾರ್ಯಾಲಯಕ್ಕೆ ಭೇಟಿ ನೀಡಿ ಸರಿಪಡಿಸಿಕೊಳ್ಳಬಹುದು.

ಎಲ್ಲಿ ಖಾತೆ ಸಕ್ರಿಯ ಮಾಡಬೇಕು?: 70,831 ಪಡಿತರ ಚೀಟಿಗಳ ಬ್ಯಾಂಕ್ ಖಾತೆ ಸಮಸ್ಯೆ ಇರುತ್ತದೆ. ಪಡಿತರ ಚೀಟಿದಾರರಿಗೆ ಹಣ ಜಮೆಯಾಗದೇ ಇರುವುದರಿಂದ ಫಲಾನುಭವಿಗಳು ಬ್ಯಾಂಕಿಗೆ ಭೇಟಿ ನೀಡಿ ಮೊಬೈಲ್ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ಜು.20ರೊಳಗೆ ಲಿಂಕ್ ಮಾಡಿಸಿ, ಖಾತೆಯನ್ನು ಸಕ್ರಿಯಗೊಳಿಸಿದ್ದಲ್ಲಿ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸಾಧ್ಯವಾಗಲಿದೆ. ಅರ್ಹ ಪಡಿತರ ಚೀಟಿದಾರರು ಡಿಬಿಟಿ (ನೇರ ನಗದು ವರ್ಗಾವಣೆ) ಮೂಲಕ ಹಣ ವರ್ಗಾವಣೆಯಾದ ಬಗ್ಗೆ ಹಾಗೂ ಇತರ ವಿವರಗಳಿಗೆ https://ahara.kar.nic.in/status2/statusofdbt.aspx ಪಡೆಯಬಹುದು.

ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಖಾತೆಗೆ ಡಿಬಿಟಿ ಮೂಲಕ ಹಣ ವರ್ಗಾಯಿಸಲಾಗುತ್ತಿದೆ. ಖಾತೆ ಬಗ್ಗೆ ಸಮಸ್ಯೆಯಿರುವ ಚೀಟಿಗಳ ಬಗ್ಗೆ ಆಯಾ ಪಡಿತರ ಅಂಗಡಿಗಳಲ್ಲಿ ಹೆಸರು ಪ್ರಕಟಿಸಿದ್ದು ಬ್ಯಾಂಕ್‌ಗಳಿಗೆ ತೆರಳಿ ಖಾತೆ ಸಕ್ರಿಯಗೊಳಿಸಲು ತಿಳಿಸಿದೆ.| ಕೆ.ಶ್ರೀನಿವಾಸ್ ಜಿಲ್ಲಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net