ಪಡಿತರ ಚೀಟಿ ರದ್ದುಗೊಳಿಸುವಂತಿಲ್ಲ

new edt
ಮಧುಗಿರಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೆಡಿಪಿ ಸಭೆ.
Published on

ಮಧುಗಿರಿ: ನನ್ನ ಕ್ಷೇತ್ರದಲ್ಲಿ ಪಡಿತರ ಚೀಟಿ ಪಡೆದವರೆಲ್ಲೂ ಬಡವರೇ ಆಗಿದ್ದು, ಯಾವುದೇ ಕಾರಣಕ್ಕೂ ಪಡಿತರ ಚೀಟಿ ರದ್ದುಗೊಳಿಸುವಂತಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾಪಂ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕ್ಷೇತ್ರದಲ್ಲಿ ನಿರೀಕ್ಷೆಗೂ ಮೀರಿ ಪಡಿತರ ಚೀಟಿಗಳಿದ್ದು, ಅನರ್ಹರನ್ನು ಗುರುತಿಸಿ ಪಡಿತರ ಚೀಟಿ ರದ್ದುಗೊಳಿಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ಆಹಾರ ಇಲಾಖೆ ಶಿರಸ್ತೇದಾರ್ ಶೈಲಜಾ ಸಚಿವರ ಗಮನಕ್ಕೆ ತಂದಾಗ, ಯಾವುದೇ ಪಡಿತರ ಚೀಟಿ ರದ್ಧಾಗಬಾರದು ಎಂದರು.

1,114 ಜನ ನಿವೇಶನ ರಹಿತರಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ನಜ್ಮಾ ಮಾಹಿತಿ ನೀಡಿದರು. ತಕ್ಷಣಕ್ಕೆ ಸರ್ಕಾರಿ ಸ್ಥಳ ಹುಡುಕಿ 2 ಸಾವಿರ ಜನರಿಗೆ ನಿವೇಶನ ನೀಡಬೇಕು. ಹಳ್ಳಿಗಳಲ್ಲಿ ಸ್ಮಶಾನಗಳಿಗೆ ಜಮೀನು ಗುರುತಿಸಬೇಕು. ಪಟ್ಟಣದಲ್ಲಿ ವಿದ್ಯುತ್ ಚಿತಾಗಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಎಂದು ತಹಸೀಲ್ದಾರ್, ಪುರಸಭೆ ಮುಖ್ಯಾಧಿಕಾರಿ ನಜ್ಮಾ ಅವರಿಗೆ ಸೂಚಿಸಿದರು.

ತಾಪಂ ಅಂಗಡಿ ಮಳಿಗೆಗಳು ಯಾರದ್ದೋ ಹೆಸರಿಗೆ ಮಂಜೂರಾಗಿದ್ದು, ಬೇರೆಯವರಿಗೆ ಬಾಡಿಗೆ ನೀಡಿದ್ದಲ್ಲಿ ಅಂತಹ ಅಂಗಡಿಗಳಿಗೆ ಬೀಗ ಹಾಕಿಸಿ ಎಂದು ತಾಪಂ ಇಒ ಲಕ್ಷ್ಮಣ್‌ಗೆ ಸಚಿವ ರಾಜಣ್ಣ ಸೂಚಿಸಿದರು.

ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲಿ: ತಾಲೂಕಿನ ಎಲ್ಲ ಅಧಿಕಾರಿಗಳು ಪ್ರತೀ ಬುಧವಾರ ಕೇಂದ್ರ ಸ್ಥಾನದಲ್ಲಿರಬೇಕು. ಹಳ್ಳಿಯ ಜನರು ಅಧಿಕಾರಿಗಳು ಪ್ರತೀ ಬುಧವಾರ ಸಿಗುತ್ತಾರೆ ಎಂದು ಕಚೇರಿಗಳಿಗೆ ಬರುತ್ತಾರೆ. ಆದರೆ ಜನತೆಗೆ ಸಿಗದಿದ್ದರೆ ಅವರಿಗೆ ಬಹಳಷ್ಟು ತೊಂದರೆಯಾಗಲಿದೆ. ಪ್ರತೀ ಬುಧವಾರ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು, ಜನರ ಕುಂದುಕೊರತೆ ಆಲಿಸಬೇಕು. ಅಧಿವೇಶನ ಮುಗಿದ ನಂತರ ನಾನು ಪ್ರತೀ ಬುಧವಾರ ಕ್ಷೇತ್ರದಲ್ಲಿ ಇರುತ್ತೇನೆ ಎಂದು ಕೆ.ಎನ್.ರಾಜಣ್ಣ ಹೇಳಿದರು.

ಕಾಳೇನಹಳ್ಳಿಯಲ್ಲಿ 1.70 ಕೋಟಿ ರೂಪಾಯಿ ವೆಚ್ಚದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ನಿಲಯಕ್ಕೆ ಅನುದಾನ ನಿಗದಿಯಾಗಿದ್ದು, 42 ಲಕ್ಷ ರೂಪಾಯಿ ಮಂಜೂರಾಗಿದೆ. ಆದರೂ ಕೆಲಸ ಮುಗಿಸಿಲ್ಲ. ಕೇವಲ 2 ಲಕ್ಷ ಖರ್ಚು ಮಾಡಿದ್ದೀರಾ. ಹಣ ಇದ್ದರೂ ಕೆಲಸ ಏಕೆ ಮಾಡುತ್ತಿಲ್ಲ. ಎರಡು ತಿಂಗಳಿಂದ ಏನು ನಿದ್ದೆ ಮಾಡುತ್ತಿದ್ದೀರಾ ಎಂದು ರಾಜಣ್ಣ ತರಾಟೆ ತೆಗೆದುಕೊಂಡರು. ಕಾಲುಬಾಯಿ ರೋಗದಿಂದ 90 ರಾಸುಗಳು ಮೃತಪಟ್ಟಿದ್ದು, 84 ರಾಸುಗಳಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಕೆಡಿಪಿ ನಾಮಿನಿ ಸದಸ್ಯ ಬಿ.ನಾಗೇಶ್ ಬಾಬು, ಆಡಳಿತಾಧಿಕಾರಿ ಗಂಗಪ್ಪ, ತಾಪಂ ಇಒ ಲಕ್ಷ್ಮಣ್ ಇದ್ದರು.

ಬೋಗಸ್ ಬಿಲ್ ಮಾಡಿಕೊಂಡು ಹಣ ಹೊಡೆಯುತ್ತಾರೆ: ಹಾಸ್ಟೆಲ್ಗಳಲ್ಲಿ ಮೆನ್ಯು ಪ್ರಕಾರ ಊಟ ನೀಡಬೇಕು, ಕುಡಿಯುವ ನೀರು, ಸ್ವಚ್ಛತೆಗೆ ಆದ್ಯತೆ ನೀಡಬೇಕು. ಯಾವ ಸೌಲಭ್ಯಗಳ ಕೊರತೆಯಿದೆಯೋ ಅದರ ಬಗ್ಗೆ ನಮಗೆ ಮಾಹಿತಿ ನೀಡಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಜಯರಾಂ ಅವರಿಗೆ ರಾಜಣ್ಣ ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಬಹುತೇಕ ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳಿರುವುದಿಲ್ಲ. ಆದರೂ ಬೋಗಸ್ ಬಿಲ್ ಮಾಡಿಕೊಂಡು ಹಣ ಹೊಡೆಯುತ್ತಾರೆ, ಈ ಬಗ್ಗೆ ಎಚ್ಚರವಹಿಸಿ ಎಂದರು. ಸರ್ಕಾರಿ ಕಾಲೇಜಿನ ಸಮೀಪದ ಹಾಸ್ಟೆಲ್ ಶಿಥಿಲಗೊಂಡಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ ಮಾಹಿತಿ ನೀಡಿದಾಗ, ಎಷ್ಟು ವರ್ಷದ ಕಟ್ಟಡ ಎಂದು ಸಚಿವರು ಪ್ರಶ್ನಿಸಿದರು. 20 ವರ್ಷದ ಕಟ್ಟಡ ಎಂದಾಗ, ಆರ್‌ಸಿಸಿ ಕಟ್ಟಡ 20 ವರ್ಷಕ್ಕೇ ಶಿಥಿಲಗೊಳ್ಳುತ್ತದೆ ಎಂದರೆ ಅದಕ್ಕೆ ಯಾರು ಜವಾಬ್ದಾರರು. ಸರಿಯಾಗಿ ನಿರ್ವಹಣೆ ಇಲ್ಲದಿದ್ದಾಗ ಕಟ್ಟಡಗಳು ಶಿಥಿಲವಾಗುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿಕ್ಷಕರು ಶಾಲಾ ಸಂದರ್ಭದಲ್ಲಿ ಶಾಲೆಗಳಲ್ಲೇ ಇರಬೇಕು. ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸಿ ಎಂದು ಬಿಇಒ ಹನುಮಂತರಾಯಪ್ಪಗೆ ರಾಜಣ್ಣ ಸೂಚಿಸಿದರು.

ರೈತರಿಗೆ ಟೆಕ್ಸೋ ಮೋಟಾರ್ ನೀಡಿ: ಗಂಗಾ ಕಲ್ಯಾಣದ ಪಂಪ್‌ಸೆಟ್‌ಗಳು ಗುಣಮಟ್ಟದಿಂದ ಕೂಡಿರಬೇಕು. ಟೆಕ್ಸೋ ಮೋಟಾರ್ ಅನ್ನೇ ಕೊಡಬೇಕು ಎಂದು ಸಚಿವರು ಸೂಚಿಸಿದಾಗ, ಅದು ಫಲಾನುಭವಿಗಳ ಆಯ್ಕೆಗೆ ಬಿಟ್ಟಿದ್ದಾರೆ ಎಂದು ಇಲಾಖೆಯ ಅಧಿಕಾರಿ ಬಸವರಾಜು ಹೇಳಿದರು. ಇದಕ್ಕುತ್ತರಿಸಿದ ಸಚಿವರು, ಫಲಾನುಭವಿಗಳಿಗೆ ಗುಣಮಟ್ಟದ ಬಗ್ಗೆ ಅರಿವಿರುವುದಿಲ್ಲ. ಟೆಕ್ಸ್ ಮೋ ಮೋಟಾರ್ ಅನ್ನೇ ನೀಡಬೇಕು. ಬುಧವಾರ ಫಲಾನುಭವಿಗಳನ್ನು ಕರೆಸಿ ವಿತರಿಸಬೇಕು ಎಂದು ಸೂಚನೆ ನೀಡಿದರು.

ದೊಡ್ಡೇರಿ ಹೋಬಳಿಯ 8 ಕೆರೆಗೆ ನೀರು ಹರಿಸಿ: ಮಧುಗಿರಿ ತಾಲೂಕಿನಲ್ಲಿ ಶೇ.80 ಎತ್ತಿನಹೊಳೆ ಯೋಜನೆಯ ಪೈಪ್‌ಲೈನ್ ಕಾಮಗಾರಿ ಮುಗಿದಿದೆ. ಇನ್ನೆರಡು ವರ್ಷದೊಳಗೆ ತಾಲೂಕಿಗೆ ನೀರು ಹರಿಯಲಿದೆ ಎಂದು ಎಇಇ ವಿಜಯ್ ಪ್ರಸಾದ್ ಮಾಹಿತಿ ನೀಡಿದಾಗ, ದೊಡ್ಡೇರಿ ಹೋಬಳಿಯ 8 ಕೆರೆಗಳಿಗೆ ನೀರು ಹರಿಯಬೇಕು. ಎತ್ತಿನ ಹೊಳೆ ನೀರು ಹರಿದರೆ ಅದನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಆ ಕೆರೆಗಳಿಗೆ ಇದೆಯಾ ಎಂಬುದನ್ನು ಪರಿಶೀಲಿಸಿ ಎಂದು ಸಚಿವರು ಸೂಚಿಸಿದರು. ಎಸಿ, ಎಸ್ಟಿಗಳಿಗೆ ಎರಡು ಎಕರೆ ಜಮೀನಿದ್ದು, ಮೇವು ಬೆಳೆಯುವ ಅನುಕೂಲಗಳಿದ್ದರೆ ಸರ್ಕಾತದ ವತಿಯಿಂದ 2 ಹಸುಗಳ ವಿತರಣೆಗೆ ಚಿಂತನೆ ನಡೆದಿದೆ ಎಂದು ಕೆ.ಎನ್.ರಾಜಣ್ಣ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net