ಪಠ್ಯೇತರ ಚಟುವಟಿಕೆಯಲ್ಲೂ ಪಾಲ್ಗೊಳ್ಳಿ

27 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರತಿಯೊಂದು ಸವಾಲನ್ನು ಅವಕಾಶ ಎಂದು ಭಾವಿಸಿ, ಗುರಿ ಮುಟ್ಟಲು ಪ್ರಯತ್ನಿಸಬೇಕು. ಕೀಳರಿಮೆ ತೊರೆದು ಮುನ್ನಡೆಯಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್. ಹೇಳಿದರು.
ನಗರದ ಕರ್ನಾಟಕ ವಿಜ್ಞಾನ ಕಾಲೇಜಿನ ಜಿಮಖಾನ ವತಿಯಿಂದ ಇಲ್ಲಿನ ಸೃಜನಾ ರಂಗ ಮಂದಿರದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ಅಂತಿಮ ವರ್ಷದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಶೈಕ್ಷಣಿಕವಾಗಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ, ನಗದು ಬಹುಮಾನ ವಿತರಿಸಿ ಮಾತನಾಡಿದರು.
ಜೀವನದಲ್ಲಿ ಅತ್ಯುನ್ನತ ಕಾಲೇಜಿನಲ್ಲಿ ಕಲಿಯುವುದು ಸುದೈವ. ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ. ಮಹಾನ್ ನಾಯಕರ ಸಂದೇಶ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದರು.
ಕಾಲೇಜಿನ ಹಳೇ ವಿದ್ಯಾರ್ಥಿ, ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪಡೆದ ಮಂಜುನಾಥ ನಾಯಕ ಚೆಳ್ಳೂರ ಮಾತನಾಡಿ, ಕರ್ನಾಟಕ ಕಾಲೇಜು ಮತ್ತು ಧಾರವಾಡ ವಾತಾವರಣ ಬರೆಯಲು ಸ್ಫೂರ್ತಿ ನೀಡಿವೆ. ಇಲ್ಲಿ ಓದಿದ ಅನೇಕ ದಿಗ್ಗಜ ಸಾಹಿತ್ಯಕಾರರ ಬರವಣಿಗೆ ನನಗೆ ಪ್ರಭಾವ ಬೀರಿದೆ. ಪಠ್ಯದ ಜತೆಗೆ ಹೊಸತನ ಕಲಿಯುವುದು ಸಾಕಷ್ಟಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಪ್ರೊ. ಎಂ.ಎಸ್. ಸಾಳುಂಕೆ ಮಾತನಾಡಿ, ಒಂದು ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ. ಜೀವನದಲ್ಲಿ ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಿ ಗುರಿಯತ್ತ ಸಾಗಬೇಕು ಎಂದರು.
ಕಾಲೇಜಿನ ಜಿಮಖಾನದ ಉಪಾಧ್ಯಕ್ಷ ಜೆ.ಟಿ.ಗೂಡಗೂರ, ವಿ.ಬಿ.ಸಾವಿರಮಠ, ಪ್ರೊ. ಡಿ.ಬಿ.ಗೋವಿಂದಪ್ಪ, ಅಕ್ಷಯ ಹೆಗಡೆ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net