

ವಿಜಯವಾಣಿ ಸುದ್ದಿಜಾಲ ಧಾರವಾಡ
ಮಕ್ಕಳು ಓದು ಪಠ್ಯಕ್ಕಷ್ಟೇ ಸೀಮಿತವಾಗದೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದು ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಹೇಳಿದರು.
ನಗರದ ವಿದ್ಯಾಗಿರಿಯ ಜೆಎಸ್‌ಎಸ್‌ನ ಶ್ರೀ ಮಂಜುನಾಥೇಶ್ವರ ಪಿ.ಯು ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಾಂಸ್ಕೃತಿಕ ಹಾಗೂ ಕ್ರೀಡಾ ಕಾರ್ಯಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಂಸ್ಥೆಯು 50ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಹುಕ್ಕೇರಿಕರ ರಾಮರಾಯರಿಂದ ಸ್ಥಾಪಿತವಾದ ಸಂಸ್ಥೆ ಆರ್ಥಿಕ ಸಂಕಷ್ಟದಲ್ಲಿದ್ದಾಗ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ, ಡಾ. ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಂಸ್ಥೆಯನ್ನು ವಹಿಸಿದರು. ಡಾ.ನ. ವಜ್ರಕುಮಾರರ ಶ್ರಮದಿಂದ ಜೆಎಸ್‌ಎಸ್ 22 ಅಂಗ ಸಂಸ್ಥೆಗಳಲ್ಲಿ 22000 ವಿದ್ಯಾರ್ಥಿಗಳು ಹಾಗೂ 1500 ಸಿಬ್ಬಂದಿ ಕಾರ್ಯ ನಿರ್ವಹಿಸಿಸುತ್ತಿದ್ದು, ರಾಜ್ಯದ ಶಿಕ್ಷಣ ಕೇತ್ರದಲ್ಲಿ ತನ್ನದೇ ಛಾಪು ಮೂಡಿಸಿದೆ. ಎಲ್ಲ ಮಕ್ಕಳಿಗೂ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದ್ದು, ಮಕ್ಕಳು ಇದರ ಪ್ರಯೋಜನ ಪಡೆಯಲಿ ಎಂದರು.
ವಿನಾಯಕ ಭಟ್ಟ ಶೇಡಿಮನೆ ಮಾತನಾಡಿ, ಮಾನವರು ಸಮಾಜದಲ್ಲಿ ಒಳ್ಳೆ ಕಾರ್ಯ ಮಾಡಿ ದೇವರಾಗುತ್ತಾರೆ. ಅವರಲ್ಲಿ ರಾಮಕೃಷ್ಣ ಪರಮ ಹಂಸರು, ಭಕ್ತ ಕಬೀರದಾಸರು, ಇತರರಿದ್ದಾರೆ. ಡಾ. ಡಿ ವೀರೇಂದ್ರ ಹೆಗ್ಗಡೆ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮಾಜ ಸೇವೆ ಮಾಡಿ ದೈವತ್ವಕ್ಕೇರಿದ್ದಾರೆ. ಅವರಂತೆ ನಾವೂ ಒಳ್ಳೆ ಆಚಾರ-ವಿಚಾರ ನಡೆ ನುಡಿ ರೂಢಿಸಿಕೊಳ್ಳಬೇಕು. ಯುವಕರಲ್ಲಿ ಅದ್ಭುತ ಶಕ್ತಿ ಇದೆ. ಅದರ ಸದುಪಯೋಗ ಪಡೆದು ಉತ್ತಮ ಕಾರ್ಯ ಮಾಡಬೇಕು ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ವೈ.ಎಸ್. ರಾಯಬಾಗಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ಬಿ.ಎಂ. ಹುಕ್ಕೇರಿ, ಕ್ರೀಡಾ ನಿರ್ದೇಶಕ ಪವನ ಗೊರವರ, ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಡಾ. ಎಸ್. ಕೆ. ನಡುವಿನಕೇರಿ, ಇತರರು ಇದ್ದರು.
ಕ್ಷಿತಿಜಾ ಪಟೇಲ ಹಾಗೂ ಚೈತ್ರಾ ಕುರಟ್ಟಿ ನಿರೂಪಿಸಿದರು. ಅನುಷ್ಕಾ ಚೌಗಲೆ ವಂದಿಸಿದರು.