

ಚಿತ್ರದುರ್ಗ: ಪಠ್ಯಕ್ರಮದಲ್ಲಿ ಯೋಗ, ಸಂಗೀತ, ನೃತ್ಯ ಸೇರಿಸುವ ಅಗತ್ಯವಿದೆ ಎಂದು ಸಿರಿಗೆರೆಯ ತರಳಬಾಳು ಪೀಠದ ಶ್ರೀ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಜಿಲ್ಲಾಡಳಿತ, ಜಿಪಂನಿಂದ ತಾಲೂಕಿನ ಸಿರಿಗೆರೆಯಲ್ಲಿ ಬುಧವಾರ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ-ಬಾಲಕಿಯರ ಬೆಂಗಳೂರು ವಿಭಾಗಮಟ್ಟ, ರಾಜ್ಯಮಟ್ಟದ ಯೋಗಾಸನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
ಯೋಗವೆಂದರೆ ಕೇವಲ ಆಸನಗಳಲ್ಲ, ದೇಹ ಮತ್ತು ಮನಸ್ಸನ್ನು ಹತೋಟಿಗೆ ತರುವ ಸಾಧನ. ಶಿಕ್ಷಣ ಸಚಿವರು 1ರಿಂದ 10ನೇ ತರಗತಿವರೆಗೂ ಕಡ್ಡಾಯವಾಗಿ ಯೋಗ ಶಿಕ್ಷಣ ನೀಡಬೇಕೆಂದು ಪ್ರಸ್ತಾಪಿಸಿರುವುದು ಉತ್ತಮ ಬೆಳವಣಿಗೆ. ಮಕ್ಕಳಲ್ಲಿ ಶಿಸ್ತು, ಏಕಾಗ್ರತೆ ಮೂಡಲು ಸಹಕಾರಿಯಾಗಿದೆ ಎಂದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಆರೋಗ್ಯಕ್ಕಿಂತ ದೊಡ್ಡ ಸಂಪತ್ತು ಬೇರೆ ಯಾವುದೂ ಇಲ್ಲ. ಸಿರಿಗೆರೆಯಲ್ಲಿ ಮಕ್ಕಳು ಯೋಗ ಪ್ರದರ್ಶಿಸುತ್ತಿರುವುದನ್ನು ನೋಡಿದರೆ ಮನಸ್ಸಿಗೆ ಸಂತೋಷ ಉಂಟಾಗುತ್ತಿದೆ. ದೇಶದ ಪ್ರಧಾನಿ ನರೇಂದ್ರಮೋದಿ ಅವರು ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ್ದು, ಹೆಚ್ಚು ಮಹತ್ವ ದೊರೆಯುತ್ತಿದೆ ಎಂದು ಹೇಳಿದರು.
ಇದೇ ವೇಳೆ ಇಸ್ರೇಲ್ ಮತ್ತು ಗಾಜಾಪಟ್ಟಿಯಲ್ಲಿ ನಡೆಯುತ್ತಿರುವ ಯುದ್ಧ ಶೀಘ್ರವೇ ಅಂತ್ಯಗೊಳ್ಳಲೆಂದು ದೇವರಲ್ಲಿ ಪ್ರಾರ್ಥಿಸಲಾಯಿತು.
ಎಂಎಲ್ಸಿ ಕೆ.ಎಸ್.ನವೀನ್, ಬಿಇಒ ಎಸ್.ನಾಗಭೂಷಣ್, ಟಿ.ಜಿ.ಲೀಲಾವತಿ, ದೈಹಿಕ ಶಿಕ್ಷಣಾಧಿಕಾರಿ ಎ.ಪರಶುರಾಮಪ್ಪ, ವೆಂಕಟೇಶಪ್ಪ ಇತರರಿದ್ದರು. 11 ಜಿಲ್ಲೆಗಳ ಯೋಗಪಟುಗಳು ಪಾಲ್ಗೊಂಡಿದ್ದರು.