

ಬೇಲೂರು: ವಿದ್ಯಾರ್ಥಿಗಳಲ್ಲಿ ಪಠ್ಯದೊಂದಿಗೆ ವೈಜ್ಞಾನಿಕ ಸಂಶೋಧನಾ ಮನೋಭಾವವನ್ನು ಶಿಕ್ಷಕರು ಬೆಳೆಸಿದರೆ ದೇಶಕ್ಕೆ ಮತ್ತಷ್ಟು ವಿಜ್ಞಾನಿಗಳನ್ನು ಕೊಡುಗೆ ನೀಡಬಹುದು ಎಂದು ಯುನೈಟೆಡ್ ಅಕಾಡೆಮಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಲ್.ಸುರೇಶ್ ಅಭಿಪ್ರಾಯಪಟ್ಟರು.
ಪಟ್ಟಣ ಸಮೀಪದ ಯುನೈಟೆಡ್ ಅಕಾಡೆಮಿ ಶಾಲೆಯಲ್ಲಿ ಭಾರತ ಜ್ಞಾನ, ವಿಜ್ಞಾನ ಸಮಿತಿಯಿಂದ ಆಯೋಜಿಸಿದ್ದ ಎರಡನೇ ದಿನವಾದ ಮಂಗಳವಾರ ಸಿ.ವಿ.ರಾಮನ್ ಮತ್ತು ನೆಹರು ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಪ್ರತಿಯೊಬ್ಬರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಮುನ್ನಡೆದರೆ ನಮ್ಮ ದೇಶ ಪ್ರಪಂಚದಲ್ಲೆ ಅಭಿವೃದ್ಧಿ ಹೊಂದಿದ ದೇಶವಾಗುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮಲ್ಲಿ ಮೌಢ್ಯಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಕಾರಣ ಇನ್ನೂ ನಾವು ಹಿಂದುಳಿಯಲು ಕಾರಣವಾಗಿದೆ ಎಂದರು.
ಪ್ರತಿಯೊಬ್ಬರೂ ಹೊರಗಿನ ವ್ಯಕ್ತಿ, ಶಕ್ತಿಗಳ ಅತೀಂದ್ರಿಯ ನಂಬಿಕೆಗಳಿಗೆ ಬೆಲೆ ಕೊಡದೆ ವೈಜ್ಞಾನಿಕವಾಗಿ ಚಿಂತಿಸಿ ಮುನ್ನಡೆದಾಗ ಮಾತ್ರ ಉತ್ತಮ ಬೆಳವಣಿಗೆ ಸಾಧ್ಯ. ಈ ನಿಟ್ಟಿನಲ್ಲಿ ಭಾರತ ಜ್ಞಾನ, ವಿಜ್ಞಾನ ಸಮಿತಿ ಕಳೆದ ಮೂರು ದಶಕದಿಂದ ನಿರಂತರವಾಗಿ ವೈಜ್ಞಾನಿಕ ಸಂದೇಶ ನೀಡುತ್ತಾ ಬಂದಿದ್ದು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಲೂಕು ಭಾರತ ಜ್ಞಾನ ವಿಜ್ಞಾನ ಸಮಿತಿ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಶಿಕ್ಷಣ ಜಾಗೃತಿ ಮೂಲಕ ವ್ಯಕ್ತಿ ಮತ್ತು ಕುಟುಂಬಗಳಲ್ಲಿ ಆತ್ಮ ವಿಶ್ವಾಸ ತುಂಬಬೇಕಿದ್ದ ಮಾಧ್ಯಮಗಳು ಇಂದು ಜನರಲ್ಲಿ ಮೌಢ್ಯವನ್ನು ಬಿತ್ತುತ್ತಿವೆ. ಆದರೆ ನಾವುಗಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರಲು ಮುಂದಾಗಬೇಕಿದೆ ಎಂದರು.
ಭಾರತ ಜ್ಞಾನ , ಜ್ಞಾನ ಸಮಿತಿ ಸಂಸ್ಥಾಪಕ ಅಧ್ಯಕ್ಷ ಅಂತೋನಿಸ್ವಾಮಿ, ಕಸಾಪ ತಾಲೂಕು ಅಧ್ಯಕ್ಷ ಬಿ.ಎಲ್.ರಾಜೇಗೌಡ, ಉಪನ್ಯಾಸಕ ಟಿ.ಡಿ.ತಮ್ಮಣ್ಣಗೌಡ, ಪತ್ರಕರ್ತ ಹೆಬ್ಬಾಳು ಹಾಲಪ್ಪ, ಕಲಾವಿದ ಚಂದನ್‌ಕುಮಾರ್, ಕಸಾಪ ಖಜಾಂಚಿ ಮಂಜೇಗೌಡ, ಯುನೈಟೆಡ್ ಅಕಾಡೆಮಿ ಸಂಸ್ಥೆ ಖಜಾಂಚಿ ಲೋಕೇಶ್, ಮುಖ್ಯ ಶಿಕ್ಷಕರಾದ ಡಿ.ರಘುರಾಮ್, ಮುಖ್ಯ ಶಿಕ್ಷಕಿ ಎಂ.ಎನ್.ದೀಪಾ ಸೌಭಾಗ್ಯ, ನೀಲಾ ಇದ್ದರು.