ಪಠ್ಯದೊಂದಿಗೆ ತಾಂತ್ರಿಕ ಜ್ಞಾನವೂ ಅತ್ಯವಶ್ಯಕ: ಪ್ರಾಧ್ಯಾಪಕ ಡಾ.ವಿ.ಜಿ. ಮಂಜುನಾಥ ಗುರು ಕಿವಿಮಾತು

14_HSN_03
Published on

ಹಾಸನ: ಬಿಸಿಎ ಅಧ್ಯಯನ ಮಾಡುವ ವಿದ್ಯಾರ್ಥಿಗಳು ಪಠ್ಯದೊಂದಿಗೆ ತಾಂತ್ರಿಕ ಜ್ಞಾನವನ್ನು ತಿಳಿದುಕೊಳ್ಳುವುದು ಅತ್ಯವಶ್ಯಕ ಎಂದು ಸರ್ಕಾರಿ ವಿಜ್ಞಾನ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ವಿ.ಜಿ. ಮಂಜುನಾಥ ಗುರು ತಿಳಿಸಿದರು.

ನಗರದ ಆರ್.ಸಿ. ರಸ್ತೆಯ ಗಂಧದ ಕೋಠಿ ಆವರಣದಲ್ಲಿರುವ ಮಹಿಳಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಗಣಕ ಯಂತ್ರ ವಿಭಾಗದಿಂದ ವತಿಯಿಂದ ಗುರುವಾರ ಕೃತಕ ಬುದ್ಧಿಮತೆ (ಎಐ) ಕುರಿತು ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದಾದ್ಯಂತ ಇಂದು ತಾಂತ್ರಿಕ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದು, ತಾಂತ್ರಿಕತೆ ಎಂಬುವುದು ಮನುಷ್ಯನ ಒಂದು ಭಾಗವಾಗಿದೆ ಎಂದರು.

ಪ್ರಸ್ತುತ ಖಾಸಗಿ ಹಾಗೂ ಸರ್ಕಾರಿ ಉದ್ಯಮಗಳಲ್ಲಿ ಬಿಸಿಎ ವಿದ್ಯರ್ಥಿಗಳಿಗೆ ಅನೇಕ ಉದ್ಯೋಗವಕಾಶಗಳು ದೊರೆತ್ತಿದೆ. ಯುವಕರಿಗೆ ಇಂದು ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅವಕಾಶಗಳಿದ್ದು, ಅದನ್ನು ಸದ್ಭಳಕೆ ಮಾಡಿಕೊಳ್ಳಬೇಕು. ಕೃತಿಕ ಬುದ್ಧಿಮತೆಯಿಂದಾಗಿ ಹಲವು ಹೊಸ ಹೊಸ ಅವಿಷ್ಕಾರಗಳನ್ನು ಮಾಡಲಾಗುತ್ತಿದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದೊಂದಿಗೆ ಹೊಸ ಹೊಸ ಅವಿಷ್ಕಾರಗಳ ಬಗ್ಗೆ ತಿಳಿದುಕೊಳ್ಳಬೇಕು. ಯಾಂತ್ರಿಕ ಬುದ್ಧಿವಂತಿಕೆ ಇಂದು ಹೆಚ್ಚು ಚಾಲ್ತಿಯಲ್ಲಿರುವ ತಾಂತ್ರಿಕತೆಯಾಗಿದ್ದು, ವಿದ್ಯಾಭ್ಯಾಸದ ಅವಧಿಯಲ್ಲಿಯೇ ವಿದ್ಯಾರ್ಥಿಗಳು ಇಂತಹವುಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ವಿದ್ಯಾರ್ಥಿನಿಯರು ಪಠ್ಯದ ಜತೆಗೆ ಸಾಮಾನ್ಯ ಜ್ಞಾನದ ಕಡೆಗೆ ಹೆಚ್ಚು ಒತ್ತು ನೀಡಿದರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಬಹುದು. ಪ್ರಸ್ತುತ ದಿನಮಾನಗಳಲ್ಲಿ ತಾಂತ್ರಿಕತೆ ಬೆಳೆದಿದ್ದು, ಯುವತಿಯರು ತಮ್ಮ ಕಾರ್ಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ಪಠ್ಯದೊಂದಿಗೆ ವೃತ್ತಿಗೆ ಬೇಕಾಗಿರುವ ಕೌಶಲದೊಂದಿಗೆ ಚಾಲ್ತಿಯಲ್ಲಿರುವ ಹೊಸ ಅವಿಷ್ಕಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಯಾವುದೇ ಒಂದು ರಾಷ್ಟ್ರ ತಾನು ಇತರೆ ರಾಷ್ಟ್ರಕ್ಕಿಂತ ಎತ್ತರಕ್ಕೆ ಬೆಳೆಯಬೇಕಾದರೆ ಹೊಸ ಹೊಸ ಅವಿಷ್ಕಾರ ಹಾಗೂ ತಂತ್ರಜ್ಞಾನವನ್ನು ಅಳವಡಿಸಿಕೊಂಡಾಗ ಮಾತ್ರ ಸಾಧ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಗಣಕಯಂತ್ರ ವಿಭಾಗದ ಮುಖ್ಯಸ್ಥ ಎಚ್.ಎಂ.ಸುರೇಶ್ ಕುಮಾರ್, ಐಕ್ಯೂಎಸಿ ಸಂಚಾಲಕ ಜಿ.ಆರ್.ಮೋಹನ್ ಕುಮಾರ್, ಉಪನ್ಯಾಸಕರಾದ ರಮೇಶ್, ಸಂದೀಪ್, ಪ್ರಿಯಾಂಕಾ, ವರ್ಷಿತಾ, ತೇಜಸ್ ಕುಮಾರ್, ಗೀತಾಂಜಲಿ, ಚೈತ್ರಾ ಹಾಗೂ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net