ಪಠ್ಯದೊಂದಿಗೆ ಕ್ರೀಡೆ, ಕಲೆಯಲ್ಲೂ ಆಸಕ್ತಿ ಬೆಳೆಸಿಕೊಳ್ಳಿ

mysore
Published on

ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನಿವೃತ್ತ ಡಿವೈಎಸ್‌ಪಿ, ಸಾಹಿತಿ ಎಚ್.ಎಲ್.ಶಿವಬಸಪ್ಪ ಹೊರೆಯಾಲ ತಿಳಿಸಿದರು.

ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜಿನ ವತಿಯಿಂದ ಕಲಾಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳು ಪಠ್ಯಚಟುವಟಿಕೆಯ ಜತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಇದರಿಂದ ಮಕ್ಕಳ ಸರ್ವಾಂಗೀಣ ಪ್ರಗತಿಗೆ ನೆರವಾಗಲಿದೆ ಎಂದರು.

ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿಭಾಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪಾಲಕರು ಅರಿತುಕೊಳ್ಳಬೇಕು. ಶಿಕ್ಷಣ ಕ್ಷೇತ್ರ ಅಭಿವೃದ್ಧಿಯೊಂದಿಗೆ ಕ್ರೀಡಾ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರ ಪ್ರಗತಿ ಸಾಧಿಸುತ್ತದೆ ಎಂದರು.

ಮಕ್ಕಳ ಪ್ರತಿಭೆ ಗುರುತಿಸಿ, ಸರಿಯಾದ ಮಾರ್ಗದರ್ಶನ ಮಾಡುವ ಕೆಲಸ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಸನ್ಮಾರ್ಗ ತೋರುವ ಜತೆಗೆ ಭವಿಷ್ಯದ ಬಗ್ಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು ಅದನ್ನು ಸಾಧನೆಗೆ ಶ್ರಮಿಸಲು ಮಾರ್ಗದರ್ಶನ ನೀಡಬೇಕು ಎಂದರು.

ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ. ಆದ್ದರಿಂದ ಶಿಕ್ಷಣ ಪಡೆದುಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಬೇಕು. ಶೈಕ್ಷಣಿಕ ಜೀವನ ಅನೇಕ ಸವಾಲುಗಳಿಂದ ಕೂಡಿರುತ್ತದೆ.

ಬದುಕಿಗೆ ಪದವಿ ಪ್ರಮಾಣ ಮುಖ್ಯವಲ್ಲ. ಸಮಾಜದಲ್ಲಿ ಉತ್ತಮವಾಗಿ ಬದುಕನ್ನು ನಡೆಸುವುದು ಮುಖ್ಯ. ಅದಕ್ಕೆ ಶಿಕ್ಷಣದ ಮೂಲಕ ಮುಂದಿನ ಭದ್ರ ಬುನಾದಿಯನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.

ಮರಿಮಲ್ಲಪ್ಪನವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಪ್ರಾಂಶುಪಾಲ ಡಾ.ಅನಿಲ್ ಎಸ್.ಕರಭೀಮಗೋಳ, ಶೈಕ್ಷಣಿಕಾಧಿಕಾರಿ ಮಂಗಳಾ ಮುದ್ದುಮಾದಪ್ಪ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಂ.ಪ್ರಸಾದ್, ಸಾಹಿತ್ಯ ವೇದಿಕೆ ಸಂಚಾಲಕಿ ಜಿ.ಸುಧಾ, ಕ್ರೀಡಾವೇದಿಕೆ ಸಂಚಾಲಕ ಎನ್.ಬಿ.ಪರಶಿವಮೂರ್ತಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net