

ಚಿಕ್ಕಮಗಳೂರು: ಶಿಕ್ಷಕರು ಪಠ್ಯದ ಜೊತೆಗೆ ಮಕ್ಕಳ ಆರೋಗ್ಯ ಮತ್ತು ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ವಹಿಸುವಂತೆ ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಶ್ಮಿತಾ ಕೆ.ಗೌಡ ತಿಳಿಸಿದರು.
ತಾಲೂಕಿನ ಮಲ್ಲೇನಹಳ್ಳಿ ಗ್ರಾಮದ ಶ್ರೀ ದೇವಿರಮ್ಮ ವಿದ್ಯಾ ಸಂಸ್ಥೆಯ ೨೩ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡುವುದರ ಜೊತೆಗೆ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು ಎಂದು ತಿಳಿಸಿದರು.
ಮಕ್ಕಳಿಗೆ ವಿದ್ಯೆ ನಿಜವಾದ ಆಸ್ತಿ. ಅದನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ. ಪೋಷಕರು ತಮ್ಮ ಮಕ್ಕಳಿಗೆ ಹಣ, ಅಂತಸ್ತು, ಐಶ್ವರ್ಯ ಮಾಡದೇ ಅವರ ಮುಂದಿನ ಏಳಿಗೆಗೆ ಶಿಕ್ಷಣವನ್ನೇ ಆಸ್ತಿಯನ್ನಾಗಿ ಮಾಡಬೇಕು ಎಂದು ಮನವಿ ಮಾಡಿದರು.
ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕಾವ್ಯ ಮೋಹನ್ ಮಾತನಾಡಿ, ಪೋಷಕರು ತಮ್ಮ ಮಕ್ಕಳಿಗೆ ಮೊಬೈಲ್‌ನಿಂದ ದೂರವಿರುವಂತೆ ನೋಡಿಕೊಳ್ಳಬೇಕು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ ನಂತರ ತಮ್ಮ ಜವಾಬ್ದಾರಿ ಮುಗಿಯಿತು ಎಂದು ತಿಳಿಯದೇ ತಮ್ಮ ಮಕ್ಕಳು ಯಾವ ರೀತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಎಂಬುದನ್ನು ತಿಳಿಯಲು ಶಿಕ್ಷಕರ ಜೊತೆ ನಿರಂತರ ಸಂಪರ್ಕದಲ್ಲಿರಬೇಕು ಎಂದು ಹೇಳಿದರು.
ಮಲ್ಲೇನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಯತೀಶ್ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಶಿಕ್ಷಣದ ಜೊತೆಗೆ ಗುರು ಹಿರಿಯರಿಗೆ ಗೌರವ ಕೊಡುವ ಸಂಸ್ಕಾರವನ್ನು ಕಲಿಸಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರೆಯಲು ಶಿಕ್ಷಕರ ಜೊತೆಗೆ ಪೋಷಕರ ಪಾತ್ರ ಬಹಳ ಮುಖ್ಯ ಎಂದರು.
ಸಿಎAಎಸ್‌ಎಸ್‌ಎಸ್ ಸಂಸ್ಥೆ ಸಂಯೋಜಕಿ ಪ್ರಮೀಳಾ ಮಾತನಾಡಿ, ದೇವಿರಮ್ಮ ವಿದ್ಯಾ ಸಂಸ್ಥೆ ಮಕ್ಕಳ ವಿದ್ಯಾಭ್ಯಾಸಕ್ಕೆ ಒಳ್ಳೆಯ ಅಡಿಪಾಯ ಹಾಕಿಕೊಟ್ಟಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಾಧನೆ ಮಾಡಿದ ಮಕ್ಕಳಿಗೆ ಪೋಷಕರು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಕಳೆದ ೨೩ ವರ್ಷಗಳಿಂದ ದೇವಿರಮ್ಮ ವಿದ್ಯಾ ಸಂಸ್ಥೆಯು ಸ್ವಂತ ಕಟ್ಟಡವಿಲ್ಲದೆ, ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ವಿದ್ಯಾ ಸಂಸ್ಥೆಗೆ ಸುತ್ತಮುತ್ತಲಿನ ಗ್ರಾಮದ ನೂರಕ್ಕೂ ಹೆಚ್ಚಿನ ಮಕ್ಕಳು ವಿದ್ಯೆ ಕಲಿಯುತ್ತಿದ್ದು, ಆದಷ್ಟು ಬೇಗ ಗ್ರಾಮ ಪಂಚಾಯಿತಿ ವತಿಯಿಂದ ಕಟ್ಟಡ ನಿರ್ಮಾಣಕ್ಕೆ ಸ್ವಂತ ನಿವೇಶನ ಗುರುತು ಮಾಡಿಕೊಡುವಂತೆ ಮನವಿ ಮಾಡಿದರು.
ಸಂಸ್ಥೆಯ ಕಾರ್ಯದರ್ಶಿ ಎಂ.ಆರ್.ಹೇಮಲತಾ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯು ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳು, ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಹೇಳಿದರು.
ಶ್ರೀ ದೇವಿರಮ್ಮ ವಿದ್ಯಾ ಸಂಸ್ಥೆ ಅಧ್ಯಕ್ಷ ಜೆ.ಎಸ್.ರುದ್ರಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಇಂದು ಉನ್ನತ ಸ್ಥಾನದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿದೇಶದಲ್ಲಿ ಸೇವೆ ಸಲ್ಲಿಸುವ ಬದಲು ನಮ್ಮ ದೇಶದಲ್ಲೇ ಸೇವೆ ಸಲ್ಲಿಸುವಂತೆ ಮನವಿ ಮಾಡಿದರು.
ವಿದೇಶಗಳಿಗಿಂತ ನಮ್ಮ ದೇಶದಲ್ಲೇ ವಿಜ್ಞಾನ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯುವ ಜನಾಂಗ ದುಶ್ಚಟಗಳಿಗೆ ಬಲಿಯಾಗದೆ, ಶಿಕ್ಷಣ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಾನಸಿಕವಾಗಿ ಸದೃಡವಾಗಬಹುದು ಎಂದು ಹೇಳಿದರು.
ಪ್ರತಿಯೊಬ್ಬರೂ ಆಹಾರ ಪದ್ಧತಿಯನ್ನು ಬದಲಾಯಿಸಿಕೊಳ್ಳಬೇಕು. ಇಂದಿನ ವಾತಾವರಣ ಬಹಳ ಹದಗೆಟ್ಟಿದ್ದು, ಎಲ್ಲರೂ ತಮ್ಮ ಮನೆಯ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡುವ ಮೂಲಕ ಉತ್ತಮ ಪರಿಸರವನ್ನು ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷೆ ಲಲಿತಾ ಲೋಕೇಶ್, ಸದಸ್ಯರಾದ ಪ್ರೇಮ ಶಿವಕುಮಾರ್, ಪಲ್ಲವಿ, ಸುನೀತಾ ಸ್ವಾಮಿ, ಕಾಫಿ ಬೆಳೆಗಾರ ಚಂದ್ರೇಗೌಡ, ಸಂಸ್ಥೆಯ ಸದಸ್ಯರಾದ ಎಂ.ಆರ್.ವಿನುಪ್ರಸಾದ್, ಎಂ.ಆರ್.ಪುನೀತ್, ಶಿಕ್ಷಕಿಯರಾದ ಚಂದ್ರಕಲಾ, ಶಿವಗಾಮಿ, ಭೂಮಿಕಾ, ಸ್ಮಿತಾ, ಮಣಿ, ಶಿಲ್ಪ, ಭಾಗ್ಯ, ರೂಪ, ಅನಿತಾ ಉಪಸ್ಥಿತರಿದ್ದರು.