

ಹಾಸನ: ಕೋಟಿ ಹಣಕ್ಕಿಂತ ಮೇಟಿ ವಿದ್ಯೆ ಲೇಸು ಎನ್ನುವಂತೆ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೋರಬೇಕು. ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ರೂಢಿಸಿಕೊಳ್ಳಬೇಕು ಎಂದು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಹಾಗೂ ಹಿರಿಯ ರಂಗಭೂಮಿ ಕಲಾವಿದ ಎ.ಸಿ. ರಾಜು ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು-ಸ್ವಾಯತ್ತ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ, ರಾಜ್ಯ ಮಟ್ಟದ ಅಂತರ ಕಾಲೇಜುಗಳ ಜನಪದಗೀತೆ ಮತ್ತು ಭಾವಗೀತೆ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಜಾನಪದ ಕಲೆ ನಶಿಸಿ ಹೋಗುತ್ತಿದೆ ಇದನ್ನು ಉಳಿಸುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು
ಪ್ರಾಂಶುಪಾಲ ಡಾ. ಎಂ.ಬಿ. ಇರ್ಷಾದ್‌ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರ ತೆಗೆಯುವುದೇ ಇಂತಹ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಜನರಿಂದ ಜನರಿಗೆ ಹರಡುತ್ತಾ, ದೇಶದ ಪಾರಂಪರಿಕ ಸೊಗಡನ್ನು ಜನಪದ ಸಾರುತ್ತದೆ ಎಂದು ಹೇಳಿದರು.
ಜನಪದ ಸ್ಪರ್ಧೆಯ ತೀರ್ಪುಗಾರರಾಗಿ ಕಲಾವಿದರಾದ ದೊಡ್ಡಳ್ಳಿ ರಮೇಶ್, ನಾರಾಯಣಗೌಡ, ಗ್ಯಾರಂಟಿ ರಾಮಣ್ಣ ಹಾಗೂ ಭಾವಗೀತೆ ಸ್ಪರ್ಧೆಯ ತೀರ್ಪುಗಾರರಾಗಿ ಕಲಾವಿದರಾದ ಕುಮಾರ್, ನಿರ್ದೇಕ ಜಯಶಂಕರ್‌ಬೆಳಗುಂಬ, ಶಂಕರೇಗೌಡ ಅವರು ತೀರ್ಪು ನೀಡಿದರು.
ರಾಜ್ಯದ ವಿವಿಧ ಕಾಲೇಜುಗಳಿಂದ ವಿದ್ಯಾರ್ಥಿಗಳು ಜನಪದ ಮತ್ತು ಭಾವಗೀತಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಜನಪದ ಗೀತೆ ಸ್ಪರ್ಧೆಯಲ್ಲಿ ಕೊಣನೂರು ಬಿ.ಎಂ.ಶೆಟ್ಟಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ದರ್ಶನ್ ಪ್ರಥಮ ಬಹುಮಾನ, ದ್ವಿತೀಯ ಮಂಡ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹರ್ಷವರ್ಧನ್ ಹಾಗೂ ತೃತೀಯ ಬಹುಮಾನವನ್ನು ಹುಣಸೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮಿತಾ ಪಡೆದುಕೊಂಡರು.
ಭಾವಗೀತೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹುಣಸೂರು ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸುಶ್ಮಿತಾ, ದ್ವಿತೀಯ ಬಹುಮಾನವನ್ನು ಹಾಸನ ಗಂಧದಕೋಠಿ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಿಯಾಂಕಾ, ಎಚ್‌ಆರ್‌ಐಎಚ್‌ಇ ಕಾಲೇಜಿನ ಸಿ.ಸ್ಮತಿ ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಥಮ ಬಹುಮಾನವಾಗಿ 5 ಸಾವಿರ ನಗದು ದ್ವಿತೀಯ ಬಹುಮಾನ 3 ಸಾವಿರ, ತೃತೀಯ 2 ಸಾವಿರ ಪಾರಿತೋಷಕ ಮತ್ತು ಪ್ರಮಾಣ ಪತ್ರ ನೀಡಲಾಯಿತು. ರಾಜ್ಯದ ವಿವಿಧ ಭಾಗಗಳ ಪದವಿ ಕಾಲೇಜುಗಳ 60 ಕ್ಕೂ ಸ್ಪರ್ಧಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಿ.ಎಸ್.ರಾಜು, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಬಿ.ಎಚ್.ಶ್ರೀನಿವಾಸ್,ಪರೀಕ್ಷಾ ನಿಯಂತ್ರಕರಾದ ಡಾ. ಕೆ.ಡಿ.ಮುರುಳೀಧರ್ ., ಪತ್ರಾಂಕಿತ ವ್ಯವಸ್ಥಾಪಕ ಕೆ.ಟಿ. ಸತ್ಯಮೂರ್ತಿ, ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕರು, ಉಪನ್ಯಾಸಕರು, ಆಡಳಿತ ವರ್ಗದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.