

ದಾವಣಗೆರೆ: ಪಠ್ಯದ ವಿಷಯಗಳನ್ನು ಓದುವ ಜತೆಯಲ್ಲೇ ಪರಿಸರವನ್ನೂ ಅಧ್ಯಯನ ಮಾಡಬೇಕು. ಇದರಿಂದ ಅನೇಕ ಕೌಶಲ, ಪ್ರತಿಭೆಗಳು ಬೆಳೆಯಲಿವೆ ಎಂದು ದಾವಣಗೆರೆ ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ(ಡ್ಯಾಮ್ಸ್) ಉಪಾಧ್ಯಕ್ಷ ಎಂ.ಎನ್.ಸಂತೋಷ್‌ಕುಮಾರ್ ತಿಳಿಸಿದರು.
ಕೊಂಡಜ್ಜಿ ರಸ್ತೆಯ ಬಿ.ಜೆ.ಎಂ. ಶಾಲಾವರಣದಲ್ಲಿ ಸೋಮವಾರ ಬಿ.ಜೆ.ಎಂ ಬ್ಲಾಸಂ ಎಂಬ ಹೆಸರಿನಲ್ಲಿ ಹಮ್ಮಿಕೊಂಡಿದ್ದ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
ಇಂದು ಮಕ್ಕಳ ಕಲಿಕೆಗೆ ಹೆಚ್ಚಿನ ಅವಕಾಶಗಳಿದ್ದು ಅವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಮಾತು ಕಡಿಮೆ ಮಾಡಿ, ಸುತ್ತಮುತ್ತಲ ಚಟುವಟಕೆಗಳ ಬಗ್ಗೆ ನಿಗಾ ವಹಿಸಬೇಕು. ಇದರಿಂದ ನಿಮಗರಿವಿಲ್ಲದೆಯೇ ನಿಮ್ಮಲ್ಲಿ ಅನೇಕ ಬದಲಾವಣೆ ಆಗಲಿವೆ ಎಂದು ಉದಾಹರಣೆಗಳೊಂದಿಗೆ ವಿವರಿಸಿದರು.
ಶೈಕ್ಷಣಿಕ ಸಲಹೆಗಾರರು ಮತ್ತು ಸಂಯೋಜಕ ಜಗನ್ನಾಥ ನಾಡಿಗೇರ್ ಮಾತನಾಡಿ, ಒಂದು ಶಾಲೆಯು ಪಠ್ಯದ ವಿಷಯಗಳನ್ನು ಬೋಧಿಸುವುದರೊಂದಿಗೆ ಮಕ್ಕಳಲ್ಲಿ ಕ್ರಿಯಾಶೀಲತೆ ಬೆಳೆಸಬೇಕು. ವಿದ್ಯಾರ್ಥಿ ಜೀವನದ ಅನೇಕ ನೆನಪುಗಳನ್ನು ನೀಡಬೇಕು. ಬಿಜೆಎಂ ಶಾಲೆ ಈ ಕೆಲಸ ಮಾಡುತ್ತಿದೆ ಎಂದರು.
ಶಾಲೆಯ ಕಾರ್ಯದರ್ಶಿ ಕೆ.ಎಸ್.ಮಂಜುನಾಥ್ ಅಗಡಿ ಮಾತನಾಡಿ ಮಕ್ಕಳಲ್ಲಿ ಕ್ರಿಯಾಶೀಲತೆ ಮತ್ತು ಪಠ್ಯವಿಷಯದ ಕುರಿತು ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದ ಈ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡ್ಯಾಮ್ಸ್‌ನ ನಿರ್ದೇಶಕಿ ಅನಸೂಯಮ್ಮ, ಯರಗುಂಟೆ ಕ್ಲಸ್ಟರ್‌ನ ಸಿ.ಆರ್.ಪಿ ಸೈಫುಲ್ಲಾ, ಆಡಳಿತ ಮಂಡಳಿಯ ಎಂ.ಕೆ. ವಿದ್ಯಾ, ಶಾಲೆಯ ಪ್ರಾಚಾರ್ಯೆ ಎಸ್.ಕೆ. ಶಾಜಿಯಾ ಇದ್ದರು.
400ಕ್ಕೂ ಹೆಚ್ಚು ಮಾದರಿಗಳು ಅಥವಾ ಭಿತ್ತಿಚಿತ್ರಗಳು ಪ್ರದರ್ಶಿಸಲ್ಪಟ್ಟವು. 330ಕ್ಕೂ ಹೆಚ್ಚು ಮಕ್ಕಳು ವಿಜ್ಞಾನ, ಗಣಿತ, ಸಮಾಜ, ಇತಿಹಾಸ, ಕನ್ನಡ, ಇಂಗ್ಲೀಷ್, ಹಿಂದಿ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿಗಳು ಇದ್ದವು.
----