

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಿಕ್ಷಣ ಸಂಸ್ಥೆ ಹಾಗೂ ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದರ ಜತೆಗೆ ಭಾರತೀಯ ಸಂಸ್ಕೃತಿ ಪರಿಚಯಿಸುವ ಪಾಠ ಮಾಡಬೇಕು. ವಿದ್ಯಾಭಾರತಿ ಈ ಕಾರ್ಯವನ್ನು ಹಲವು ವರ್ಷಗಳಿಂದ ಮಾಡುತ್ತಿದೆ. ಶಿಕ್ಷಕರಿಗೂ ಪ್ರಶಿಕ್ಷಣ ಶಿಬಿರ ನಡೆಸುತ್ತಿದೆ. ಇದರ ಪ್ರಯೋಜನವನ್ನು ಶಿಕ್ಷಕರು ಪಡೆಯಬೇಕು ಎಂದು ಹಿರಿಯ ಶಿಕ್ಷಣ ತಜ್ಞ ನರಸಿಂಹ ಗಲಗಲಿ ಹೇಳಿದರು.
ತಾಲೂಕಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರದಲ್ಲಿ ವಿದ್ಯಾಭಾರತಿ ವತಿಯಿಂದ ಶನಿವಾರ ಏರ್ಪಡಿಸಿದ್ದ ಜಿಲ್ಲೆಯ ಸಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಜ್ಞಾನ ಪರಂಪರೆ ಕುರಿತು ವಿದ್ವಾನ್ ವಿನಾಯಕ ಭಟ್ ಶೆಡೆಮನೆ ಮಾತನಾಡಿ, ವೇದಗಳು ಭಾರತೀಯ ಜ್ಞಾನ ಪರಂಪರೆಗೆ ಮೂಲ. ಭಾರತೀಯ ಜ್ಞಾನ ಪರಂಪರೆ ನಿರಂತರವಾಗಿರುತ್ತದೆ. ಜಗತ್ತಿಗೆ ಮಾರ್ಗದರ್ಶಿಯಾದ, ಅತ್ಯಂತ ಘನತೆ ಗೌರವ ಹೊಂದಿರುವ ಭಾರತೀಯ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಕಾರ್ಯದರ್ಶಿ ರಾಘವೇಂದ್ರ ಅಂಬೇಕರ ಅತಿಥಿಯಾಗಿ ಆಗಮಿಸಿದ್ದರು. ವಿದ್ಯಾಭಾರತಿ ಜಿಲ್ಲಾಧ್ಯಕ್ಷ ಶಾಂತಣ್ಣ ಕಡಿವಾಳ ಅಧ್ಯಕ್ಷತೆ ವಹಿಸಿದ್ದರು. ಆನಂದ ಕುಲಕರ್ಣಿ, ನಾಗೇಂದ್ರ ದೊಡಮನಿ, ಅಶೋಕ ನಾಯಕ, ಸುಹಾಸ ಆನೇಗುಂದಿ, ಅನಿತಾ ರೈ, ಶಿಕ್ಷಕರು, ಇತರರು ಇದ್ದರು.
ಸಮಾರಂಭದಲ್ಲಿ ಜಿಲ್ಲೆಯ 18 ವಿದ್ಯಾ ಸಂಸ್ಥೆಗಳ 200 ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗ,ಆಡಳಿತ ಮಂಡಳಿ ಸದಸ್ಯರು ಭಾಗವಹಿಸಿದ್ದರು.