

ಮೈಸೂರು: ಎಲ್ಲ ನಾಗರಿಕರಿಗೂ ತುರ್ತು ಪರಿಸ್ಥಿತಿಯಲ್ಲಿ ಜೀವರಕ್ಷಣೆ ಮಾಡುವ ತರಬೇತಿಯ ಅಗತ್ಯವಿದೆ. ಈ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಪಠ್ಯದಲ್ಲಿ ಇದನ್ನು ಸೇರಿಸುವ ಕುರಿತು ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎಲ್.ಶ್ರೀನಿವಾಸ್ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಜೀವರಕ್ಷಕ ಟ್ರಸ್ಟ್ ಹಾಗೂ ರೋಟರಿ ಮೈಸೂರಿನಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯ ಶಾಲೆಗಳಲ್ಲಿನ ಮುಖ್ಯ ಶಿಕ್ಷಕರು, ಶಿಕ್ಷಕರು, ನಿಲಯ ಪಾಲಕರು ಹಾಗೂ ಅಧಿಕಾರಿಗಳಿಗೆ ಶುಕ್ರವಾರ ಆಯೋಜಿಸಿದ್ದ ಜೀವಸುರಕ್ಷತೆಗೆ ಅಗತ್ಯ ಮೂಲ ಜ್ಞಾನ ಕುರಿತ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಜೀವ ರಕ್ಷಣೆ ಮಾಡುವ ವಿಧಾನವನ್ನು ಎಲ್ಲರೂ ತಿಳಿದಿದ್ದರೆ ಮುಂದೆ ಯಾವುದಾದರೂ ಸಂದರ್ಭದಲ್ಲಿ ಉಪಯೋಗಕ್ಕೆ ಬರುತ್ತದೆ. ಆದ್ದರಿಂದ ಜೀವ ರಕ್ಷಣೆ ಕುರಿತು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪಠ್ಯಕ್ರಮಗಳಲ್ಲಿಯೂ ಜೀವ ರಕ್ಷಣೆ ವಿಧಾನವನ್ನು ತಿಳಿಸಿಕೊಡಬೇಕು. ಇದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಹೇಳಿದರು.
ಶಿಕ್ಷಕರು ಇಲ್ಲಿ ಕಲಿತಿದ್ದನ್ನು ಹಾಡಿಗಳಲ್ಲಿನ ಜನರಿಗೆ ತಿಳಿಸಿ ಅರಿವು ಮೂಡಿಸಬೇಕು. ನೀವೆಲ್ಲರೂ ಸಹಕಾರ ನೀಡಿದರೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳ ಮೂಲಕ ಹಾಡಿ ಜನರನ್ನು ಮುಖ್ಯವಾಹಿನಿಗೆ ತರಬಹುದು ಎಂದರು.
ಸಮಾಜದಲ್ಲಿ ಹಿಂದುಳಿದ ವರ್ಗಗಳಿಗೆ ಆದ್ಯತೆ ನೀಡಬೇಕು ಎನ್ನುವ ಉದ್ದೇಶದಿಂದ ನಮ್ಮ ಸಂಸ್ಥೆಯಲ್ಲಿ ಆದಿವಾಸಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾವುದೇ ಕಾರ್ಯಕ್ರಮ ಮಾಡಿದರೂ ಬುಡಕಟ್ಟು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮ ನಡೆ-ಹಾಡಿಯ ಕಡೆ ಇದ್ದೇ ಇದೆ. ಕಾಡಂಚಿನಲ್ಲಿರುವ ಆದಿವಾಸಿಗಳಿಗೆ ಅರಣ್ಯ ಹಕ್ಕು ಕಾಯ್ದೆ ಬಗ್ಗೆ ಶಿಕ್ಷಕರು ಅರಿವು ಮೂಡಿಸಬೇಕು ಎಂದರು.
ಶಿಕ್ಷಕರು ಸರ್ಕಾರದ ಮೇಲೆ ಒತ್ತಡ ಹಾಕಿದರೆ ನಿಮ್ಮ ಬೇಡಿಕೆಯೂ ಈಡೇರುತ್ತದೆ. ಜು.26ರಿಂದ ಆಶ್ರಮ ಶಾಲೆಗಳ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು. ಈ ಕಾರ್ಯಕ್ರಮ ಪ್ರತಿಯೊಬ್ಬರಿಗೂ ಅನುಕೂಲವಾಗಿದೆ ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪ ನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್, ವೈದ್ಯರಾದ ಡಾ.ರೇಖಾ, ಡಾ.ಸುಮಂತ್, ಡಾ.ದಾಕ್ಷಾಯಿಣಿ, ಡಾ.ರಮೇಶ್ ಬಿ.ಗಣಿ, ಸಂಸ್ಥೆಯ ತಾಲೂಕು ಕಲ್ಯಾಣಾಧಿಕಾರಿಗಳಾದ ಎಚ್.ಸಿ.ಬಸವರಾಜು, ಎಂ.ನಾರಾಯಣಸ್ವಾಮಿ, ಮಹ್ಮದ್ ಶಫೀರ್, ಸತ್ಯರಾಜ್, ದಿವ್ಯಾ, ವಿದ್ಯಾಶ್ರೀ, ನಂದಿನಿ, ಪ್ರತೀಕ್ಷಾ, ಅನಿಲ್‌ಕುಮಾರ್, ಕೃಷ್ಣ, ದೇವರಾಜ್ ಇತರರು ಇದ್ದರು.