

ಮೈಸೂರು: ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ರಂಗ ಶಿಕ್ಷಣವನ್ನು ಸೇರಿಸಬೇಕು ಎಂದು ರಂಗಕರ್ಮಿ ಮಂಡ್ಯ ರಮೇಶ್ ಸಲಹೆ ನೀಡಿದರು.
ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ವತಿಯಿಂದ ಕಿರುರಂಗಮಂದಿರದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ರಂಗ ಮತ್ತು ನೃತ್ಯ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲಾ ಹಂತದಲ್ಲಿ ಮಕ್ಕಳಿಗೆ ರಂಗ ಶಿಕ್ಷಣವನ್ನು ಕಲಿಸಬೇಕಿದೆ. ಇದರಿಂದ ಸಂವಹನ ಕೌಶಲ ಮತ್ತು ಭಾಷಾ ಬಳಕೆ ಕಲಿಕೆಗೆ ಅನುಕೂಲವಾಗಲಿದೆ ಎಂದರು.
ರಂಗಭೂಮಿ ಸರ್ವಶ್ರೇಷ್ಠ ಪ್ರದರ್ಶನ ಕಲೆ. ಇದೊಂದು ಭಿನ್ನ ಕಲೆ. ಇಲ್ಲಿ ಎಲ್ಲವೂ ಇದೆ. ನಾಟಕದಲ್ಲಿ ಅಭಿನಯಿಸುವ ನಟನಿಗೆ ಮೇಕಪ್ ಮಾಡಿಕೊಳ್ಳಲು ರಸಾಯನಶಾಸ್ತ್ರ ತಿಳಿದುಕೊಂಡಿರಬೇಕು. ಸಂಗೀತ, ಭೌಗೋಳಿಕತೆ ತಿಳಿದುಕೊಂಡಿರಬೇಕು. ಪುರಾಣ, ಸಾಹಿತ್ಯವನ್ನೂ ಓದಿಕೊಂಡಿರಬೇಕು. ಈ ಕಲೆ ಎಲ್ಲವನ್ನೂ ಕಲಿಸಿಕೊಡುತ್ತದೆ ಎಂದರು.
ರಂಗಭೂಮಿಗೆ ಬರುವ ಮುನ್ನ ಜಾನಪದ ಕಲೆಯನ್ನು ತಿಳಿದುಕೊಂಡಿದ್ದರೆ ಬಹಳಷ್ಟು ಅನುಕೂಲ. ನಟನೆ, ನೃತ್ಯ ಕಲಿತುಕೊಳ್ಳಲು ಸುಲಭವಾಗಲಿದೆ ಎಂದರು.
ನಾಟಕ ಕಲೆಯಿಂದ ಪ್ರಬುದ್ಧತೆ ಬರಲಿದೆ. ರಂಗಕರ್ಮಿಗಳಿಗೆ ಸಾಹಿತ್ಯದ ನೆಲೆಗಟ್ಟು ಬೇಕು. ಇಲ್ಲವಾದರೆ ಅಪಾಯಕಾರಿ. ಓದದಿದ್ದರೂ ಕಲಾವಿದ ಆಗಬಹುದು ಎಂಬುದು ಸರಿಯಲ್ಲ. 4ನೇ ತರಗತಿವರೆಗೆ ಮಾತ್ರ ಕಲಿತಿದ್ದ ಡಾ.ರಾಜ್‌ಕುಮಾರ್ ಅದ್ಭುತ ಕಲಾವಿದರಾಗಲು ಸಾಧ್ಯವಾಗಿದ್ದು ಅವರ ಓದು. ಕಂಪನಿ ರಂಗಭೂಮಿ ಎಂಬ ವಿಶ್ವವಿದ್ಯಾಲಯದಲ್ಲಿ ಪಳಗಿದ್ದ ಅವರು, ನಟನೆಯೊಂದಿಗೆ ರಾತ್ರಿ ಹೊತ್ತು ರಾಮಾಯಣ, ಮಹಾಭಾರತ ಓದಿಕೊಂಡಿದ್ದರು. ಈ ಕಾರಣಕ್ಕೆ ಅವರು ಐತಿಹಾಸಿಕ, ಪೌರಾಣಿಕ ಸೇರಿದಂತೆ ಎಲ್ಲ ಬಗೆಯ ಪಾತ್ರಗಳನ್ನು ನಿರ್ವಹಿಸಲು ಸಾಧ್ಯವಾಯಿತು ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುಸ್ವಾಮಿ, ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಕೆ.ಇ.ಗೋವಿಂದೇಗೌಡ, ಶಿಬಿರದ ನಿರ್ದೇಶಕ ಕೃಷ್ಣ ಜನಮನ ಇದ್ದರು.