ಪಠ್ಯಕ್ರಮ ವಿದ್ಯಾರ್ಥಿಗಳನ್ನು ವಿಮರ್ಶೆಗೆ ಹಚ್ಚುವಂತಿರಲಿ: ಪ್ರೊ.ಬೆಟ್ಟಕೋಟೆ

3447b12d-0da6-4f7d-a604-634dd788cb38
Published on

ಮೈಸೂರು: ಪಠ್ಯಕ್ರಮ ವಿದ್ಯಾರ್ಥಿಗಳನ್ನು ವಿಮರ್ಶೆಗೆ, ಚಿಂತನೆಗೆ ಹಾಗೂ ಪ್ರಯೋಗಾತ್ಮಕ ಕಾರ್ಯಕ್ಕೆ ಹಚ್ಚುವಂತೆ ಪೂರಕವಾಗಿರಬೇಕು ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಅಭಿಪ್ರಾಯಪಟ್ಟರು.


ವಿಶ್ವವಿದ್ಯಾಲಯದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯಮಟ್ಟದ ಪಠ್ಯಕ್ರಮ ಕಾರ್ಯಾಗಾರದಲ್ಲಿ ಮಾತನಾಡಿದರು. ಪಠ್ಯಕ್ರಮ ವಿದ್ಯಾರ್ಥಿಗಳ ಕ್ರಿಯಾಶೀಲತೆ, ಸೃಜನಶೀಲತೆ ಹೆಚ್ಚಿಸುವಂತಹ ಅಂಶಗಳನ್ನು ಒಳಗೊಂಡಿರಬೇಕು, ಕೌಶಲ ಆಧಾರಿತ ಪಠ್ಯ ಅಳವಡಿಸಿಕೊಳ್ಳಬೇಕು ಎಂದರು.


ಕಲೆ ಮತ್ತು ವಿಜ್ಞಾನಗಳ ನಡುವೆ ಪಠ್ಯ ಸಂಬಂಧವಾದ ಮತ್ತು ಪಠ್ಯೇತರ ಚಟುವಟಿಕೆ ನಡುವೆ ಶುದ್ಧ ಶೈಕ್ಷಣಿಕ ಮತ್ತು ವೃತ್ತಿಪರ ಶಿಕ್ಷಣದ ಹಾದಿಗಳು ತೆರೆದುಕೊಳ್ಳುವಂತೆ ಪಠ್ಯ ರಚನಾಕ್ರಮ ಹೊಂದಿರಬೇಕು. ಬೋಧನೆ, ಕಲಿಕೆಯಲ್ಲಿ ವ್ಯಾಪಕವಾಗಿ ತಂತ್ರಜ್ಞಾನ ಬಳಕೆ ಮಾಡಬೇಕಿದೆ. ತಾರ್ಕಿಕ ತೀರ್ಮಾನಕ್ಕೆ ಅವಕಾಶ ಮಾಡಿಕೊಡುವ ಹಾಗೂ ನವೀನತೆಯನ್ನು ಕಂಡುಕೊಳ್ಳುವ ಸೃಜನಾತ್ಮಕತೆ, ತಾರ್ಕಿಕ ಚಿಂತನೆ ಪ್ರೋತ್ಸಾಹಿಸುವ ಪಠ್ಯಕ್ರಮ ರಚಿಸಬೇಕು ಎಂದರು.


ಶೈಕ್ಷಣಿಕ ಕಲಿಕೆಯೊಂದಿಗೆ ಕೈಗಾರಿಕಾ ಸಹಭಾಗಿತ್ವ ಹೊಂದುವಂತೆ ಅವಕಾಶ ಸೃಷ್ಟಿಸಲು ಸಂಶೋಧನಾತ್ಮಕ ಘಟಕವನ್ನು ಪಠ್ಯಕ್ರಮದಲ್ಲಿ ಅಳವಡಿಸಲು ಸಲಹೆ ನೀಡಿದರು.
ಕುಲಸಚಿವ ಪ್ರೊ.ಟಿ.ಎಸ್.ದೇವರಾಜ್ ಮಾತನಾಡಿ, ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ನಮ್ಮ ವಿಶ್ವವಿದ್ಯಾಲಯ ಅಳವಡಿಸಿಕೊಂಡಿದೆ ಎಂದರು.
ರಾಜ್ಯ ಪಠ್ಯಕ್ರಮ ಸಮಿತಿಯ ಸದಸ್ಯರಾದ ಪ್ರೊ.ರಾಮಕೃಷ್ಣಯ್ಯ, ಪ್ರೊ.ಸುಶೀಲಾ, ಪ್ರೊ.ಸಿ.ಎ.ಶ್ರೀಧರ್, ವೀಣಾಮೂರ್ತಿ, ರೂಪಾ ರವೀಂದ್ರನ್, ಪ್ರೊ.ಶಿವಣ್ಣ, ಡಾ.ಜಯದೇವಿ ಜಂಗಮಶೆಟ್ಟಿ, ಪ್ರೊ.ಅಶೋಕ್ ಕುಮಾರ್ ರಂಜೇರೆ, ಡಾ.ಶಿವಕುಮಾರ್, ಡಾ.ದುಂಡಯ್ಯ, ಡಾ.ಭುವನೇಶ್ವರಿ, ಡಾ.ಚಂದ್ರಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net