

ನರಗುಂದ: ತಾಲೂಕಿನ ಕೊಣ್ಣೂರ ಚರಮೂರ್ತೆಶ್ವರ ಮಠದ ನಿಯೋಜಿತ ಉತ್ತರಾಧಿಕಾರಿ ಶಿವಾನಂದ ಸ್ವಾಮಿಗಳ ಚರ ಪಟ್ಟಾಧಿಕಾರ ಮಹೋತ್ಸವ ಸಮಾರಂಭವನ್ನು ಅರ್ಥಪೂರ್ಣವಾಗಿ ಆಚರಿಸೋಣ ಎಂದು ಶಾಸಕ ಸಿ.ಸಿ.ಪಾಟೀಲ ಹೇಳಿದರು.
ತಾಲೂಕಿನ ಕೊಣ್ಣೂರ ಚರಮೂರ್ತೆಶ್ವರ ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮದ ಗುರು-ಹಿರಿಯರು, ಸದ್ಭಕ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೊಣ್ಣೂರ ಚರಮೂರ್ತೆಶ್ವರ ಮಠದಲ್ಲಿ ನಿರಂತರ ಪೂಜೆ, ಪುನಸ್ಕಾರ, ಧರ್ಮ ಕಾರ್ಯಗಳ ಕೈಗೊಳ್ಳುವುದಕ್ಕಾಗಿ ಕಾಯಂ ಸ್ವಾಮೀಜಿ ನೇಮಿಸಬೇಕೆಂಬುದು ಭಕ್ತರ ಬಹುದಿನಗಳ ಬೇಡಿಕೆಯಾಗಿತ್ತು. ಭಕ್ತರ ಸದಿಚ್ಛೆಯಂತೆ ಶ್ರೀಮಠಕ್ಕೆ ಶಿವಾನಂದ ಮಹಾಸ್ವಾಮಿಗಳನ್ನು ನೇಮಕಗೊಳಿಸಿದ್ದು, ಮೇ 8,9 ರಂದು ನಡೆಯಲಿರುವ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಸಮಾರಂಭವನ್ನು ಅತ್ಯಂತ ವಿಜೃಂಭಣೆಯಿಂದ ಸಮಾಜಮುಖಿಯಾಗಿ ಆಚರಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಪಟ್ಟಾಧಿಕಾರ ಮಹೋತ್ಸವದ ಯಶಸ್ಸಿಗೆ ಸಂಬಂಧಿಸಿದಂತೆ ವಿವಿಧ ಸಮಿತಿಗಳನ್ನು ರಚಿಸಿ, ಮುತ್ತೈದೆಯರಿಂದ ಪೂರ್ಣಕುಂಭ, ಅನ್ನ ಸಂತರ್ಪಣೆ, ವಿವಿಧ ಸ್ವಾಮೀಜಿಗಳ ಆಶೀರ್ವಚನದಲ್ಲಿ ಪಾಲ್ಗೊಳ್ಳುವುದರ ಕುರಿತು ಸಭೆಗೆ ಮಾರ್ಗದರ್ಶನ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಕೆರೂರ ವಿರಕ್ತಮಠದ ಡಾ.ಶಿವಕುಮಾರ ಶಿವಾಚಾರ್ಯರು ಮಾತನಾಡಿ, ಶಿವಾನಂದ ಶ್ರೀಗಳು ಶಿಸ್ತು, ಸೌಜನ್ಯ, ಪ್ರತಿಭೆ, ಪಾಂಡಿತ್ಯಗಳಿಂದ ತಮ್ಮ ವ್ಯಕ್ತಿತ್ವ ಶೃಂಗರಿಸಿಕೊಂಡಿದ್ದು, ಇಂಥ ಯತಿಗಳ ಪಟ್ಟಾಧಿಕಾರ ಮಹೋತ್ಸವ ವೈಶಿಷ್ಟ್ಯಪೂರ್ಣ ಸಮಾರಂಭವಾಗಿ ನಡೆದು ನಾಡು ಬೆಳಗುವಂತಾಗಲಿ ಎಂದರು.
ಅಶೋಕ ಶೇಬಣ್ಣವರ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ರಾಜುಗೌಡ ಕೆಂಚನಗೌಡ್ರ, ಮಾಜಿ ತಾಪಂ ಸದಸ್ಯ ಟಿ.ಬಿ. ಶಿರಿಯಪ್ಪಗೌಡ್ರ, ಶಿವಾನಂದ ಶೇಬಣ್ಣವರ, ಚಂದ್ರಶೇಖರಗೌಡ ಸಾಲಿಗೌಡ್ರ, ಉಮೇಶ ಹಿರೇಹೊಳಿ, ಉಮೇಶ ಮರ್ಚಪ್ಪನವರ, ಪರಪ್ಪ ಸಾಹುಕಾರ, ಶರಣಪ್ಪ ಕರಿಯಪ್ಪನವರ, ಇಸಾಕ ಮಸೂತಿಮನಿ, ಬಸವರಾಜ ವಾಸನ, ಶಂಕರ ವಾಲಿ, ಅಪ್ಪಣಗೌಡ ಪಾಟೀಲ, ಉಪಸ್ಥಿತರಿದ್ದರು.