

ಬೀದರ್: 12ನೇ ಶತಮಾನದಲ್ಲಿ ಮಾನವ ಕುಲದ ಕಲ್ಯಾಣಕ್ಕಾಗಿ ಬಸವಣ್ಣನವರು ಅನುಭವ ಮಂಟಪ ಎಂಬ ಮಹಾಮನೆಯನ್ನು ಕಟ್ಟಿದ್ದರು. ಜಾತಿ, ಮತ, ವರ್ಗದ ತಾರತಮ್ಯವಿಲ್ಲದ ಸಮಾನತೆ ಸಮಾಜ ನಿರ್ಮಿಸಿದ್ದರು. ಈ ಕಾರ್ಯವನ್ನು 20ನೇ ಶತಮಾನದಲ್ಲಿ ಲಿಂಗೈಕ್ಯ ಶ್ರೀ ಡಾ. ಚನ್ನಬಸವ ಪಟ್ಟದ್ದೇವರು ಅಕ್ಷರಶಃ ಮಾಡಿದ್ದಾರೆ ಎಂದು ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಬಾಬು ವಾಲಿ ಹೇಳಿದರು.
ಇಲ್ಲಿಯ ವಿದ್ಯಾನಗರದ ಡಾ.ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ಸೋಮವಾರ ರಾತ್ರಿ ಏರ್ಪಡಿಸಿದ ತಿಂಗಳ ಅನುಭವ ಮಂಟಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಟ್ಟದ್ದೇವರ ಕಾರ್ಯ ಅವಿಸ್ಮರಣೀಯ. ಬಸವಕಲ್ಯಾಣದಲ್ಲಿ ಆಧುನಿಕ ಅನುಭವ ಮಂಟಪ ಕಟ್ಟಿದರು. ಇದೀಗ ಅಲ್ಲಿ ನೂತನ ಅನುಭವ ಮಂಟಪ ಕಾರ್ಯ ನಡೆಯುತ್ತಿದೆ. ಇದಕ್ಕೆ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು ನೇತೃತ್ವ ವಹಿಸಿಕೊಂಡಿರುವುದು ಸಂತಸದ ಸಂಗತಿ. ಪಟ್ಟದ್ದೇವರ ಆಶಯದಂತೆ ರಾಜ್ಯ ಸರ್ಕಾರ 500 ಕೋಟಿ ರೂ. ವೆಚ್ಚದಲ್ಲಿ ನೂತನ ಅನುಭವ ಮಂಟಪಕ್ಕೆ ಚಾಲನೆ ನೀಡಿದ್ದು, 2 ವರ್ಷದಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ ಎಂದರು.
ಹುಮನಾಬಾದ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ. ಜಯದೇವಿ ಗಾಯಕವಾಡ ಉಪನ್ಯಾಸ ನೀಡಿ, ಲಿಂಗಾಯತವು ವೈಜ್ಞಾನಿಕ, ವೈಚಾರಿಕ ಮತ್ತು ಸರ್ವ ಸಮಾನತೆ ಧರ್ಮವಾಗಿದೆ. ಬಸವಾದಿ ಶರಣರು ವಿಶ್ವವಿದ್ಯಾಲಯಗಳು ಮಾಡದ ಕಾರ್ಯವನ್ನು ಮಾಡಿದ್ದಾರೆ ಎಂದು ಹೇಳಿದರು.
ಬಸವಕಲ್ಯಾಣದ ಅನುಭವ ಮಂಟಪದ ಅಧ್ಯಕ್ಷ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಸಾನ್ನಿಧ್ಯ, ಪ್ರೊ. ಎಸ್.ಬಿ.ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಮಹಾಲಿಂಗ ಸ್ವಾಮಿ, ಲಲಿತಾ ಮಲ್ಲಿಕಾರ್ಜುನ ವೈರಾಗೆ, ಡಾ. ಗವಿಸಿದ್ದಪ್ಪ ಪಾಟೀಲ್, ಶ್ರೀಕಾಂತ ಸ್ವಾಮಿ ಇದ್ದರು. ಶಿಲ್ಪಾ ಮಜಗೆ ಸ್ವಾಗತಿಸಿದರು. ಉಮಾಕಾಂತ ಮೀಸೆ ನಿರೂಪಣೆ ಮಾಡಿದರು. ನವಲಿಂಗ ಪಾಟೀಲ್ ವಂದಿಸಿದರು.
ಅಂತರಂಗದ ನಿರಾಕಾರ ಲಿಂಗವನ್ನು ಸಾಕಾರ ಮಾಡಿಕೊಳ್ಳಲು ಗುರುವಿನ ಅನುಗ್ರಹ ಅವಶ್ಯ. ಪ್ರತಿಯೊಬ್ಬರಲ್ಲಿಯೂ ಭಗವಂತನ ಮಹಾಶಕ್ತಿ ಅಡಗಿದೆ. ಆ ಶಕ್ತಿಯನ್ನು ಸಾಕಾರಗೊಳ್ಳಲು ಸದ್ಗುರುವಿನ ಕೃಪಾಶೀರ್ವಾದ ಮತ್ತು ಸತ್ಸಂಗದಿಂದ ಸಾಧ್ಯ.| ಶ್ರೀ ಡಾ.ಬಸವಲಿಂಗ ಪಟ್ಟದ್ದೇವರುಬಸವಕಲ್ಯಾಣ ಅನುಭವ ಮಂಟಪ ಅಧ್ಯಕ್ಷ