

ನಾಪೋಕ್ಲು: ಪಟ್ಟಣದಲ್ಲಿ ವಾಹನ ದಟ್ಟಣೆ ನಿಯಂತ್ರಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ನಾಪೋಕ್ಲು ಪಟ್ಟಣದ ಬಕಾಚಿ ರೆಸಾರ್ಟ್‌ನಲ್ಲಿ ಬುಧವಾರ ಆಯೋಜಿಸಿದ್ದ ವಾಹನ ಚಾಲಕರು ಮತ್ತು ಅಂಗಡಿ ಮಾಲೀಕರ ಸಭೆಯಲ್ಲಿ ಅವರು ಮಾತನಾಡಿದರು.
ವಾಹನಗಳ ಮಾಲೀಕರು ಪಕ್ಕಾ ದಾಖಲೆಗಳನ್ನು ಹೊಂದಿಲ್ಲದಿದ್ದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆಟೋ ಚಾಲಕರು ಸಮವಸ್ತ್ರ, ಚಾಲನಾ ಪರವಾನಗಿ, ವಿಮೆ ಸೇರಿದಂತೆ ಅಗತ್ಯವಿರುವ ಎಲ್ಲ ದಾಖಲೆಗಳನ್ನು ಹೊಂದಿರಬೇಕು ಎಂದರು.
ಪಟ್ಟಣದಲ್ಲಿ ರಸ್ತೆ ಕಿರಿದಾಗಿದ್ದು ಆಟೋ ನಿಲ್ದಾಣಕ್ಕೆ ಪಂಚಾಯಿತಿ ಹಾಗೂ ಪೊಲೀಸ್ ಇಲಾಖೆ ವತಿಯಿಂದ ಶೀಘ್ರದಲ್ಲಿ ಸ್ಥಳಾವಕಾಶ ಕಲ್ಪಿಸಲಾಗುವುದು ಎಂದರು.
ಪೊಲೀಸ್ ಇಲಾಖೆ ವತಿಯಿಂದ ನೂತನವಾಗಿ ಎನ್‌ಪಿಕೆ ನಂಬರ್ ಅಳವಡಿಸಲಾಗುವುದು. ಎಲ್ಲೆಂದರಲ್ಲಿ ಆಟೋ ನಿಲುಗಡೆ, ಮದ್ಯಪಾನ ಮಾಡಿ ಆಟೋ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂತೆ ದಿನವಾದ ಸೋಮವಾರ ವ್ಯಾಪಾರಸ್ಥರು ಮುಖ್ಯ ರಸ್ತೆ ಬದಿ ಮಾರಾಟ ಮಾಡುವುದರಿಂದ ವಾಹನ ಸಂಚಾರಕ್ಕೆ ತೊಡಕಾಗುತ್ತಿದ್ದು ರಸ್ತೆ ಬದಿಯ ವ್ಯಾಪಾರವನ್ನು ನಿರ್ಬಂಧಿಸಲಾಗುವುದು. ಅಂಗಡಿ ಮಾಲೀಕರು ವಾಹನವನ್ನು ಅಂಗಡಿಯ ಎದುರು ನಿಲ್ಲಿಸದೆ ಪೊಲೀಸ್ ಮೈದಾನದಲ್ಲಿ ನಿಲ್ಲಿಸಬೇಕು. ಸಂಜೆ 7 ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಯ ಒಳಗೆ ಲಾರಿಗಳಿಂದ ಸರಕುಗಳನ್ನು ಅಂಗಡಿ ಮಾಲೀಕರು ಇಳಿಸಬೇಕು. ಕಾರ್ಮಿಕರಿಂದ ಹಾಗೂ ಇತರರಿಂದ ಕದ್ದು ತಂದ ಕಾಫಿ, ಕರಿಮೆಣಸು ಇತರ ವಸ್ತುಗಳನ್ನು ಅಂಗಡಿ ಮಾಲೀಕರು ಖರೀದಿಸಬಾರದು. ಇಂತಹದ್ದು ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಠಾಣಾಧಿಕಾರಿ ಮಂಜುನಾಥ್ ಹೇಳಿದರು.
ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಕಾರ್ಯದರ್ಶಿ ಕುಲ್ಲೆಟಿರ ಅಜಿತ್ ನಾಣಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಮಾಚೆಟ್ಟಿರ ಕುಸು ಕುಶಾಲಪ್ಪ, ವರ್ತಕ ಎಂ.ಎ.ಮನ್ಸೂರ್ ಅಲಿ, ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಸುಕುಮಾರ್,ಅಂಗಡಿ ಮಾಲೀಕರು ಹಾಗೂ ಚಾಲಕರು ಉಪಸ್ಥಿತರಿದ್ದರು.