

ಎನ್.ಆರ್.ಪುರ: ಪಟ್ಟಣ ಪ್ರದೇಶದ ಜನರಿಗೆ ಸಮಗ್ರ ಪ್ರಾಥಮಿಕ ಆರೋಗ್ಯ ಸೇವೆ ಒದಗಿಸುವುದು ನಮ್ಮ ಕ್ಲಿನಿಕ್ ಸ್ಥಾಪನೆ ಪ್ರಮುಖ ಉದ್ದೇಶ. ಜನರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಬಸ್ತಿಮಠದ ಸಮೀಪ ರಾಷ್ಟ್ರೀಯ ನಗರ ಆರೋಗ್ಯ ಅಭಿಯಾನದಡಿ ನಮ್ಮ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿ, ಸಾರ್ವಜನಿಕರಿಗೆ ಗುಣಮಟ್ಟದ ಆರೋಗ್ಯ ಸೇವೆ, ನಿರಂತರ ಆರೋಗ್ಯ ಪಾಲನೆ ಖಾತ್ರಿಪಡಿಸುವುದು, ಕೆಳಹಂತದಿಂದ ಮೇಲಿನ ಹಂತದ ಸೇವೆಗಳನ್ನು ನೀಡುವ ಆಸ್ಪತ್ರೆಗಳಿಗೆ ರೆರಲ್ ಸೇವೆಗಳ ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಆರೋಗ್ಯ ಸೇವೆಗಳಿಗಾಗಿ ಸಾರ್ವಜನಿಕರಿಗೆ ಹಣದ ಖರ್ಚು ಕಡಿಮೆ ಮಾಡುವ, ದ್ವಿತೀಯ ಹಾಗೂ ತೃತೀಯ ಹಂತದ ಆರೋಗ್ಯ ಸಂಸ್ಥೆಗಳಲ್ಲಿ ಜನಸಂದಣಿ ಕಡಿಮೆ ಮಾಡುವ ಉದ್ದೇಶ ಸಹ ಹೊಂದಿದೆ. ನಗರ ಪ್ರದೇಶಗಳಲ್ಲಿ ಯಾವುದೇ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೌಲಭ್ಯಗಳಿಲ್ಲದ ಕೊಳೆಗೇರಿ, ದುರ್ಬಲ ಪ್ರದೇಶಗಳಿಗೆ ಆದ್ಯತೆ ನೀಡಿ, ಪ್ರತಿ 30 ಸಾವಿರದಿಂದ 60 ಸಾವಿರ ಜನಸಂಖ್ಯೆಗೆ ಒಂದರಂತೆ ನಮ್ಮ ಕ್ಲಿನಿಕ್ ಸ್ಥಾಪಿಸಲಾಗುತ್ತಿದೆ ಎಂದರು.
ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಒ.ನರಸಿಂಹಮೂರ್ತಿ ಮಾತನಾಡಿ, ರಾಜ್ಯದ ನಗರ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ನಮ್ಮ ಕ್ಲಿನಿಕ್‌ನಲ್ಲಿ ಎಂಬಿಬಿಎಸ್ ಪದವಿ ಪಡೆದ ಒಬ್ಬರು ವೈದ್ಯರು, ಶುಶ್ರೂಷಕಿ, ಪ್ರಯೋಗಾಲಯ ತಜ್ಞರು ಹಾಗೂ ಡಿ ದರ್ಜೆ ನೌಕರರು ಇರುತ್ತಾರೆ ಎಂದರು.
ಶೃಂಗೇರಿ ಕ್ಷೇತ್ರದ ಮೂರೂ ತಾಲೂಕು ಕೇಂದ್ರಗಳಲ್ಲಿ ಕೊಳಚೆ ನೀರು ಶುದ್ಧೀಕರಣಕ್ಕಾಗಿ ಇತರ ಕಾಮಗಾರಿಗಾಗಿ 14 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆಯಾಗಿದೆ ಎಂದು ಮಾಹಿತಿ ನೀಡಿದರು.
ಬಸ್ತಿಮಠದ ಲಕ್ಷ್ಮೀಸೇನಾಭಟ್ಟಾರಕ ಸ್ವಾಮೀಜಿ ಮಾತನಾಡಿ, ಜನರ ಆರೋಗ್ಯ ಸೇವೆಗಾಗಿ ನಮ್ಮ ಕ್ಲಿನಿಕ್ ಸ್ಥಾಪಿಸಲಾಗಿದೆ. ಸಾರ್ವಜನಿಕರು ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಜತೆ ಸಂಯಮದಿಂದ ವರ್ತಿಸಿದಾಗ ಮಾತ್ರ ವೈದ್ಯರಿಂದ ಉತ್ತಮ ಸೇವೆ ಪಡೆಯಲು ಅನುಕೂಲವಾಗುತ್ತದೆ ಎಂದರು.
ಮಠಕ್ಕೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರೂ ಬಂದಾಗ ಅವರಿಗೂ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಚಿಕಿತ್ಸೆ ಪಡೆಯಲು ನಮ್ಮ ಕ್ಲಿನಿಕ್ ಸಹಾಯವಾಗಲಿದೆ. ಭದ್ರಾ ಅಣೆಕಟ್ಟು ನಿರ್ಮಿಸಿದ ನಂತರ ತಾಲೂಕು ಕೇಂದ್ರ ಹತ್ತಿರದ ಮಾರ್ಗ ಕಳೆದು ಕೊಂಡಿದ್ದು ಶಾಸಕರು ಹಳೇ ಚಿಕ್ಕಮಗಳೂರು-ಎನ್.ಆರ್.ಪುರ ರಸ್ತೆ ಸಂಪರ್ಕ ಕಲ್ಪಿಸಲು ಪ್ರಯತ್ನಿಸಬೇಕು. ಅಲ್ಲದೆ ಭದ್ರಾ ಹಿನ್ನೀರಿಗೆ ಲಾಂಚ್ ವ್ಯವಸ್ಥೆ ಕಲ್ಪಿಸಿ ಲಕ್ಕವಳ್ಳಿಗೆ ಸಮೀಪದ ಮಾರ್ಗದ ವ್ಯವಸ್ಥೆ ಮಾಡಬೇಕು. ಶಾಸಕರ ಎಲ್ಲ ಅಭಿವೃದ್ಧಿ ಕಾರ್ಯಕ್ಕೆ ಮಠ ಸಹಕಾರ ನೀಡಲಿದೆ ಎಂದರು.
ತಹಸೀಲ್ದಾರ್ ತನುಜಾ ಟಿ. ಸವದತ್ತಿ, ಗ್ರಾಪಂ ಸದಸ್ಯರಾದ ಸುನಿಲ್‌ಕುಮಾರ್, ರಮೇಶ್, ದೇವಂತ್, ರಮೇಶ್, ಕೆಡಿಪಿ ಸದಸ್ಯ ಅಂಜುಮ್, ಶಶಿಕುಮಾರ್, ಬಗರ್ ಹುಕುಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ, ಆಸ್ಪತ್ರೆ ಸಿಬ್ಬಂದಿ ಪಿ.ಪಿ.ಬೇಬಿ, ಭಗವಾನ್, ದರ್ಶನಾಥ್, ಗಾಯತ್ರಿ, ಶಿಲ್ಪಾ ಇತರರಿದ್ದರು.