ಪಟಾಕಿ-ಹತ್ತಿ ತುಂಬಿದ್ದ ಲಾರಿಗಳು ಡಿಕ್ಕಿ

24 Dwd 5
Published on

ಧಾರವಾಡ: ಪಟಾಕಿ ಮತ್ತು ಹತ್ತಿ ತುಂಬಿದ್ದ ಲಾರಿಗಳ ಮಧ್ಯೆ ಡಿಕ್ಕಿ ಸಂಭವಿಸಿ ಬುಧವಾರ ಇಡೀ ದಿನ ಆತಂಕ ಸೃಷ್ಟಿಸಿದ ಘಟನೆ ಹುಬ್ಬಳ್ಳಿ- ಧಾರವಾಡ ಬೈಪಾಸ್​ನ ಇಟ್ಟಿಗಟ್ಟಿ ಬಳಿ ನಡೆದಿದೆ.

ಲಾರಿಯೊಂದರಲ್ಲಿ ತಮಿಳುನಾಡಿನ ಶಿವಕಾಶಿಯಿಂದ ಮುಂಬೈಗೆ ಪಟಾಕಿಗಳನ್ನು ಸಾಗಿಸಲಾಗುತ್ತಿತ್ತು. ಮತ್ತೊಂದು ಲಾರಿ ಬೆಳಗಾವಿಯಿಂದ ಹುಬ್ಬಳ್ಳಿ ಕಡೆಗೆ ಹತ್ತಿ ಸಾಗಿಸುತ್ತಿತ್ತು. ಬೆಳಗ್ಗೆ 10.30ರ ಸುಮಾರಿಗೆ ಎರಡೂ ಲಾರಿಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಯಾವುದೇ ಹಾನಿ ಸಂಭವಿಸಿಲ್ಲ. ಆದರೆ, ಅಪಘಾತವಾದಾಗ ಲಾರಿಯಲ್ಲಿ ಪಟಾಕಿ ಇರುವುದು ಗಮನಕ್ಕೆ ಬರುತ್ತಿದ್ದಂತೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ತೆರಳಿದ ಪೊಲೀಸರು ಮತ್ತು ಅಗ್ನಿ ಶಾಮಕ ದಳದ ಸಿಬ್ಬಂದಿ, ಮುಂಜಾಗ್ರತಾ ಕ್ರಮವಾಗಿ ಪಟಾಕಿ ತುಂಬಿದ್ದ ಲಾರಿಯನ್ನು ಹತ್ತಿರದ ಕೆರೆ ಬಳಿ ನಿಲ್ಲಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಠಾಣಾಧಿಕಾರಿ ಅಮೃತ ತಾಳೂರಕರ, ಅನುಮತಿ ಪಡೆದಿರುವ ವಾಹನಗಳಲ್ಲಿ ಮಾತ್ರ ಪಟಾಕಿ ಸಾಗಾಟಕ್ಕೆ ಅವಕಾಶವಿದೆ. ಆದರೆ, ಸಾಮಾನ್ಯ ಗೂಡ್ಸ್ ವಾಹನದಲ್ಲಿ ಪಟಾಕಿ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ಗ್ರಾಮೀಣ ಠಾಣೆ ಇನ್​ಸ್ಪೆಕ್ಟರ್​ಗೆ ತಿಳಿಸಲಾಗಿದೆ. ಖಾಸಗಿ ಅವಘಡವಾಗಿರುವುದರಿಂದ ಅಗ್ನಿಶಾಮಕ ದಳಕ್ಕೆ ಸರ್ಕಾರ ನಿರ್ಧರಿಸಿದ ಶುಲ್ಕ ಭರಿಸಿದ ನಂತರವೇ ವಾಹನವನ್ನು ಬಿಡುಗಡೆ ಮಾಡಲಾಗುವುದು ಎಂದರು.

ಮತ್ತೊಂದು ಅವಘಡ

ಧಾರವಾಡ: ಹತ್ತಿ ತುಂಬಿಕೊಂಡು ಹೊರಟಿದ್ದ ಲಾರಿಗೆ ಬೆಂಕಿ ತಗುಲಿದ ಘಟನೆ ನಗರದ ಹೊಸ ಎಪಿಎಂಸಿ ಬಳಿ ಬುಧವಾರ ನಡೆದಿದೆ. ಸವದತ್ತಿಯಿಂದ ಬೇಲೂರ ಕಡೆಗೆ ತೆರಳುತ್ತಿದ್ದ ಲಾರಿಗೆ ವಿದ್ಯುತ್ ಸ್ಪರ್ಷವಾಗಿ ಬೆಂಕಿ ಹೊತ್ತಿಕೊಂಡಿದೆ. ಆದಾಗ್ಯೂ ಚಲಿಸುತ್ತಿದ್ದ ಲಾರಿ ಕಂಡು ಗಾಬರಿಯಾದ ಜನರು ಚಾಲಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೆ ಲಾರಿ ನಿಲ್ಲಿಸಿದ ಚಾಲಕ, ಜನರ ಸಹಾಯದಿಂದ ಬೆಂಕಿ ನಂದಿಸಿದರು. ಇದರಿಂದ ಸಂಭವನೀಯ ಅವಘಡ ತಪ್ಪಿದಂತಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net