

ಕಮಲನಗರ: ಹಿರಿಯ ನಾಗರಿಕರು ಮತ್ತು ಮಕ್ಕಳ ಆರೋಗ್ಯ ದೃಷ್ಟಿಯಿಂದ ಹಾಗೂ ವಾಯು ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಹಸಿರು ಪಟಾಕಿಗಳನ್ನು ಬಳಕೆ ಮಾಡಬೇಕು. ಮಾರಾಟಕ್ಕೆ ಅಧಿಕೃತ ಪರವಾನಗಿ ಕಡ್ಡಾಯವಾಗಿದೆ ಎಂದು ಸಿಪಿಐ ಅಮರೆಪ್ಪ ಶಿವಬಲ್ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಭಾನುವಾರ ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ ಮಾರಾಟಗಾರರಿಗಾಗಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಿಯಮ ಉಲ್ಲಂಘಿಸಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಪಿಎಸ್‌ಐ ಚಂದ್ರಶೇಖರ ನಿರ್ಣೆ ಮಾತನಾಡಿ, ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸುವುದು ಸಹಜ. ಸರ್ಕಾರ ಪಟಾಕಿ ಮಾರಾಟಕ್ಕೆ ಹಲವು ಮಾರ್ಗಸೂಚಿ ನಿಯಮಗಳನ್ನು ಜಾರಿಗೊಳಿಸಿದೆ. ಮಾರಾಟಗಾರರು ಪರವಾನಗಿಗಾಗಿ ಅರ್ಜಿ ಸಲ್ಲಿಸತಕ್ಕದು. ಈಗಾಗಲೆ ೪ ಜನ ಮಾರಾಟಗಾರು ಅರ್ಜಿ ಸಲ್ಲಿಸಿದ್ದು, ಅದನ್ನು ಪರಿಶೀಲಿಸಿ ಪರವಾನಗಿ ನೀಡಲಾಗುತ್ತದೆ ಎಂದರು.
ವ್ಯಾಪಾರಿಗಳಾದ ಪ್ರಶಾಂತಖಾನಾಪುರೆ, ರಮೇಶ ಬಿರಾದಾರ, ದಿಲೀಪ ಸಜ್ಜನಶೆಟ್ಟಿ, ರಾಜಕುಮಾರ ಬಿರಾದಾರ, ಗ್ರಾಮಸ್ಥ ಮಹೇಶ ಸಜ್ಜನಶೆಟ್ಟಿ, ಲೋಕೇಶ ತೇಲಂಗ್ ಇತರರಿದ್ದರು.