

ಶ್ರೀರಂಗಪಟ್ಟಣ: ಪರಿಸರ ಮಾಲಿನ್ಯ ನಿಯಂತ್ರಣ, ಪ್ರಾಣಿ-ಪಕ್ಷಿಗಳ ಪ್ರಾಣ ರಕ್ಷಣೆ ಹಾಗೂ ನವಜಾತ ಶಿಶುಗಳ ಆರೋಗ್ಯ ಕಾಳಜಿ ಹಿತದೃಷ್ಟಿಗಾಗಿ ಭಾರಿ ಪ್ರಮಾಣದ ಸಿಡಿಮದ್ದು ಕಾರಕ ಪಟಾಕಿಗಳನ್ನು ಸಾಧ್ಯವಾದಷ್ಟು ಸಿಡಿಸುವುದನ್ನು ಪ್ರಜ್ಞಾವಂತರಾದ ನಾವೇ ತ್ಯಜಿಸುವ ಮೂಲಕ ಜ್ಞಾನ ಮತ್ತು ಸಂತೋಷದ ಬೆಳಕಿನ ಹಣತೆ ಬೆಳಗಬೇಕಿದೆ ಎಂದು ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತ ಸಾಧಕ ಡಾ.ಆರ್.ರಾಘವೇಂದ್ರ ತಿಳಿಸಿದರು.
ಪಟ್ಟಣದಲ್ಲಿ ಮಂಗಳವಾರ ಶ್ರೀರಂಗಪಟ್ಟಣ ರೋಟರಿ ಕ್ಲಬ್ ಸದಸ್ಯರ ಸಹಯೋಗದೊಂದಿಗೆ ಮೈಸೂರಿನ ಶೇಷಾದ್ರಿಪುರಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎನ್‌ಎಸ್‌ಎಸ್ ಘಟಕ ಹಾಗೂ ಅಚೀವರ್ಸ್ ಅಕಾಡೆಮಿ ವಿದ್ಯಾರ್ಥಿಗಳೊಂದಿಗೆ ಮುಖ್ಯರಸ್ತೆಯಲ್ಲಿ ಜಾಗೃತಿ ಫಲಕಗಳೊಂದಿಗೆ ಜಾಥಾ ನಡೆಸಿ ಪಟಾಕಿಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಿ ಬಳಿಕ ಅವರು ಮಾತನಾಡಿದರು.
ನಮ್ಮಲ್ಲಿನ ಅಂಧಕಾರ ಅಳಿಸಿ ಸ್ನೇಹ, ಪ್ರೀತಿ, ಸಂತೋಷ ಬೆಳಕನ್ನು ಮಣ್ಣಿನ ಹಣತೆಯಲ್ಲಿ ಬೆಳಗಬೇಕಿದೆ. ಹೀಗಾಗಿ ಭಾರಿ ಪ್ರಮಾಣದಲ್ಲಿ ಪಟಾಕಿಗಳನ್ನು ಸಿಡಿಸುವುದರಿಂದ ನಮಗೆ ಅರಿವಿಲ್ಲದೆ ಬಿಡುಗಡೆಗೊಳ್ಳುವ ಹಾನಿಕಾರಕ ಅನಿಲಗಳು ಮತ್ತು ವಿಷಕಾರಿ ವಸ್ತುಗಳಿಂದ ವಾಯು ಮಾಲಿನ್ಯಕ್ಕೆ ಕಾರಣೀಕೃತರಾಗುತ್ತಿದ್ದೇವೆ. ಮಾತ್ರವಲ್ಲದೆ ಶಬ್ದ ಮಾಲಿನ್ಯಕ್ಕೂ ಕಾರಣವಾಗಿ ನಮ್ಮ ಪರಿಸರದಲ್ಲಿನ ಪ್ರಾಣಿ-ಪಕ್ಷಿಗಳ ಅಪಾರ ಪ್ರಾಣ ಹಾನಿ, ಅಂಧತ್ವ ಹಾಗೂ ಮನೆಯಲ್ಲಿರುವ ನಮ್ಮ ನವಜಾತ ಶಿಶುಗಳಿಗೂ ಪಟಾಕಿಗಳ ಜೋರು ಶಬ್ದಗಳಿಂದ ಶಾಶ್ವತ ಕಿವುಡುತನ ಮತ್ತು ವೃದ್ಧರಲ್ಲಿ ರಕ್ತದೊತ್ತಡ ಹಾಗೂ ಹಠಾತ್ ಹೃದಯಾಘಾತಕ್ಕೂ ಕಾರಣವಾಗಲಿದೆ. ಹೀಗಾಗಿ ಪರಿಸರ ಸಂರಕ್ಷಣೆಯೊಂದಿಗೆ ಜನರ ಪ್ರಾಣ-ಆರೋಗ್ಯ ರಕ್ಷಣೆ ಮಾಡಲು ಎಲ್ಲರೂ ಇಂತಹ ಜಾಗೃತಿ ಕಾರ್ಯಗಳಿಗೆ ಕೈಜೋಡಿಸಬೇಕೆಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದಕ್ಕೂ ಮೊದಲು ಸಂಘಟನೆಯ ಸದಸ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಳಿ ಘೋಷ ವಾಕ್ಯ ಘೋಷಣೆಯೊಂದಿಗೆ ಮಾನವ ಸರಪಳಿಯನ್ನು ಮಾಡಿ ಪಟಾಕಿ ಮತ್ತು ಪಟಾಕಿ ಸಿಡಿಸುವ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ಶಾರದಾ ವಿಲಾಸ್ ಕಾನೂನು ಕಾಲೇಜಿನ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸವಿತಾ, ಸದಸ್ಯರಾದ ಮಹಾದೇವಮ್ಮ, ಹೃದಯ್, ಕರ್ಣ, ಪ್ರಜ್ವಲ್, ದೀಕ್ಷಿತ, ದಿವಿತ್, ಅಶ್ವಿನಿ, ರವಿಕುಮಾರ್, ಸುಚಿತ್ರಾ, ಪ್ರಶಾಂತ್, ಚಂದನ್ ಇತರರು ಜಾಗೃತಿ ಜಾಥಾದಲ್ಲಿ ಭಾಗಿಯಾಗಿದ್ದರು.