ಪಟಾಕಿ ಕೊಳ್ಳುವವರ ಸಂಖ್ಯೆ ಕ್ಷೀಣ

IMG_20221025_134015
Published on

ಹೊಳೆನರಸೀಪುರ: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ವಿವಿಧ ರೀತಿಯ ಪಟಾಕಿಗಳ ಮಾರಾಟ ಕೇಂದ್ರಗಳು ಪಟ್ಟಣದ ಬಯಲು ರಂಗಮಂದಿರ ಮೈದಾನದಲ್ಲಿ ಪಟಾಕಿ ಪ್ರಿಯರನ್ನು ಕೈಬೀಸಿ ಕರೆಯುತ್ತಿದ್ದು, ಕೊಳ್ಳುವವರ ಸಂಖ್ಯೆ ಕ್ಷೀಣವಾಗಿದೆ.

ಬಯಲು ರಂಗ ಮಂದಿರದ ಆವರಣದಲ್ಲಿ 13 ಪಟಾಕಿ ಮಳಿಗೆಗಳು ತೆರೆದಿದ್ದು, ಪಟಾಕಿ ಕೊಳ್ಳುವವರಿಗೆ ವ್ಯವಸ್ಥಿತವಾಗಿ ಅನುಕೂಲ ಮಾಡಿಕೊಡಲಾಗಿದೆ. ಪುರಸಭೆಯ ಅನುಮತಿ ಪಡೆದು ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ಕೊಳ್ಳುವವರ ಸಂಖ್ಯೆ ನೀರಸವಾಗಿದೆ.

ಪಟಾಕಿಯ ಬೆಲೆ ದುಬಾರಿಯಾಗಿದ್ದು, ಕೊಳ್ಳುವವರ ಸಂಖ್ಯೆ ಕೂಡ ಕ್ಷೀಣವಾಗಿದೆ. ಶೇ.40 ರಷ್ಟು ಬೆಲೆ ದುಬಾರಿ ಆಗಿರುವುದರಿಂದ ಕೊಳ್ಳುವವರ ಜೇಬು ಖಾಲಿಯಾಗುವುದಂತೂ ಖಂಡಿತ. ವಿವಿಧ ರೀತಿಯ 10 ಪಟಾಕಿ ಇರುವ ಬಾಕ್ಸ್ ಬೆಲೆ 700 ರೂ., 20 ಪಟಾಕಿಗಳಿರುವ ಬಾಕ್ಸ್ 1800 ರೂ. ಹಾಗೂ ಹಲವು ಬಗೆಯ ಪಟಾಕಿಗಳ ಬೆಲೆ ಅಧಿಕ ಪ್ರಮಾಣದಲ್ಲಿರುವುದರಿಂದ ಬೆಲೆ ಕೇಳಿ ಜೇಬು ಮುಟ್ಟಿಕೊಳ್ಳುವಂತಾಗಿದೆ. ಮಿತವಾಗಿ ಪಟಾಕಿಗಳನ್ನು ಖರೀದಿ ಮಾಡುತ್ತಿದ್ದಾರೆ.

ಕರೊನಾ ಸಾಂಕ್ರಾಮಿಕ ರೋಗ ಬಂದ ನಂತರ ದೀಪಾವಳಿ ಹಬ್ಬದ ಸಮಯದಲ್ಲಿ ವ್ಯಾಪಾರ ವಹಿವಾಟು ನಡೆದಿರಲಿಲ್ಲ. ಕಳೆದ ಬಾರಿ ಮಳೆಯಿಂದ ವ್ಯಾಪಾರ ಅಸ್ತವ್ಯಸ್ತವಾಗಿತ್ತು. ಈ ವರ್ಷವೂ ಕೂಡ ಅದೇ ರೀತಿ ಆಗಬಹುದು ಎಂಬ ಭಯವಿತ್ತು. ಆದರೆ ಮಳೆರಾಯ ಬಿಡುವು ನೀಡಿದ ಪರಿಣಾಮ ಭರ್ಜರಿ ವ್ಯಾಪಾರ ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದವು ಹಿಂದಿನ ವರ್ಷಕ್ಕಿಂತ ಈ ಬಾರಿ ಹೆಚ್ಚು ಪಟಾಕಿ ಮಳಿಗೆಗಳು ತೆರೆದಿವೆ. ಆದರೆ ಪಟಾಕಿ ಕೊಳ್ಳುವವರು ಕಡಿಮೆಯಾಗಿದ್ದಾರೆ. ಅಂತಹ ನಿರೀಕ್ಷಿತ ಮಟ್ಟದಲ್ಲಿ ಪಟಾಕಿ ಮಾರಾಟ ನಡೆಯುತ್ತಿಲ್ಲ . ಜತೆಗೆ ಈ ವರ್ಷ ಪಟಾಕಿಯ ಬೆಲೆ ಹೆಚ್ಚಾಗಿರುವುದರಿಂದ ಮಾರಾಟ ಕಡಿಮೆಯಾಗಿದೆ ಎಂದು ವ್ಯಾಪಾರಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪಟಾಕಿ ಬೆಲೆಯನ್ನು ಶೇ.40ರಷ್ಟು ಏರಿಸಿರುವುದು ಪಟಾಕಿ ಪ್ರಿಯರಿಗೆ ಭಾರಿ ಪೆಟ್ಟನ್ನು ನೀಡಿದೆ. ಹೆಚ್ಚು ಹಣವನ್ನು ಕೊಟ್ಟು ಕೈಸುಟ್ಟುಕೊಳ್ಳುವುದು ಬೇಡವೆಂದು ನಿರ್ಧರಿಸಿ ಹೆಚ್ಚು ಪಟಾಕಿಗಳನ್ನು ಕೊಳ್ಳದೆ ಮಿತವಾಗಿ ಪಟಾಕಿಗಳನ್ನು ಕೊಂಡಿದ್ದೇವೆ ಎಂದು ಪಟಾಕಿ ಪ್ರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಧಿಕ ಶಬ್ದ, ಹೆಚ್ಚು ಹೊಗೆ ಬರುವಂತಹ ಪಟಾಕಿಗಳನ್ನು ಸಿಡಿಸದೆ ಪರಿಸರ ಸ್ನೇಹಿ ಪಟಾಕಿಗಳನ್ನು ಹಚ್ಚುವುದರಿಂದ. ಪರಿಸರ, ಶಬ್ದ, ವಾಯುಮಾಲಿನ್ಯವನ್ನು ತಡೆಗಟ್ಟುವುದರ ಜೊತೆಗೆ ನಮ್ಮ ಆರೋಗ್ಯವನ್ನು ಸಂರಕ್ಷಿಸಿಕೊಳ್ಳೋಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net