

ಬಾಳೆಹೊನ್ನೂರು: ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸಲು ಬೇಸಿಗೆ ಶಿಬಿರಗಳು ಸಹಕಾರಿಯಾಗಲಿವೆ ಎಂದು ರೋಟರಿ ಕ್ಲಬ್ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಹೇಳಿದರು.
ರೋಟರಿ ಭವನದಲ್ಲಿ ರೋಟರಿ ಕ್ಲಬ್ ಹಾಗೂ ಪೆವಿಕ್ರಿಲ್ ಕಂಪನಿಯಿಂದ ಆಯೋಜಿಸಿರುವ ಉಚಿತ ಪೈಟಿಂಗ್ ತರಬೇತಿ ಶಿಬಿರದಲ್ಲಿ ಮಾತನಾಡಿ, ಬೇಸಿಗೆ ರಜೆಯಲ್ಲಿ ಮಕ್ಕಳು ಇಂಥ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಕಲೆ ಅಧ್ಯಯನ ಹಾಗೂ ಜ್ಞಾನ ವೃದ್ಧಿಸಿಕೊಳ್ಳಬಹುದು. ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಸಾಧನೆ ಮಾಡಬಹುದು ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎ.ಆರ್.ಸುರೇಂದ್ರ ಮಾತನಾಡಿ, ಮಕ್ಕಳು ಪೈಟಿಂಗ್ ಶಿಬಿರದಲ್ಲಿ ಅಧ್ಯಯನ ಮಾಡಿ ಮನೆಯ ಗೋಡೆಗಳನ್ನು ಪೈಟಿಂಗ್ ಮೂಲಕ ಅಲಂಕರಿಸಿಕೊಳ್ಳಬಹುದು. ನಿರಂತರ ಪೈಟಿಂಗ್ ಕಲೆ ಬೆಳೆಸಿಕೊಂಡರೆ ಆರ್ಥಿಕ ಸಬಲೀಕರಣ ಸಾಧಿಸಬಹುದು ಎಂದು ತಿಳಿಸಿದರು.
ತರಬೇತುದಾರರಾದ ಶಿವಮೊಗ್ಗದ ಅನ್ನಪೂರ್ಣ, ರೋಟರಿ ಕ್ಲಬ್ ಸದಸ್ಯ ಕೆ.ಟಿ.ವೆಂಕಟೇಶ, ಸಿ.ಪಿ.ರಮೇಶ್, ಯಶವಂತ, ತಿಮ್ಮಯ್ಯ, ರಮೇಶ್, ಭೈರವಿ ಒಕ್ಕಲಿಗ ಮಹಿಳಾ ಸಂಘದ ಅಧ್ಯಕ್ಷೆ ಸಿ.ಟಿ.ರೇವತಿ, ರಜನಿ ದೇವಯ್ಯ ಇತರರಿದ್ದರು.