

ಶಿಕಾರಿಪುರ: ಗಣಪತಿ ವಿಸರ್ಜನಾಪೂರ್ವ ಮೆರವಣಿಗೆ ವೇಳೆ ಪಟಾಕಿ ಸಿಡಿಸಲು ಪೊಲೀಸರು ಅನುಮತಿ ನೀಡಲಿಲ್ಲ ಎಂದು ತಾಲೂಕಿನ ಪುನೇದಹಳ್ಳಿಯ ಗ್ರಾಮಸ್ಥರು ಗಣಪತಿಯನ್ನು ವಿಸರ್ಜಿಸದೆ ತಡರಾತ್ರಿವರೆಗೆ ಪ್ರತಿಭಟನೆ ನಡೆಸಿದರು. ನಂತರ ಡಿವೈಎಸ್‌ಪಿ ನೇತೃತ್ವದಲ್ಲಿ ಕಾನೂನು ವ್ಯಾಪ್ತಿಯ ಒಳಗೆ ಯಾರಿಗೂ ತೊಂದರೆ ಆಗದಂತೆ ಪಟಾಕಿ ಸಿಡಿಸಬೇಕು. ಮಸೀದಿಯಿಂದ ಸ್ವಲ್ಪ ಮುಂದೆ ಪಟಾಕಿ ಸಿಡಿಸಿ ಎಂದು ಸೂಚಿಸಿದರು. ಬಳಿಕ ಪೊಲೀಸರ ಸಮ್ಮುಖದಲ್ಲಿಯೇ ಗಣಪತಿ ವಿಸರ್ಜನೆ ಕಾರ್ಯ ನೆರವೇರಿತು. ಈ ಊರಿನಲ್ಲಿ ದೇವಸ್ಥಾನ ಮತ್ತು ಮಸೀದಿ ಎದುರು ಬದುರಾಗಿವೆ. ಮಸೀದಿ ಇರುವ ಕಾರಣಕ್ಕೆ ಆ ಜಾಗದಲ್ಲಿ ಪಟಾಕಿ ಸಿಡಿಸಬೇಡಿ ಎಂದು ಡಿವೈಎಸ್‌ಪಿ ಶಿವಾನಂದ ಮದರಕಂಡಿ ಗಣೇಶ ಸಮಿತಿಯವರಿಗೆ ಸೂಚಿಸಿದ್ದರು. ಇದು ಸಂಘರ್ಷಕ್ಕೆ ಕಾರಣವಾಗಿತ್ತು. ಮಧ್ಯರಾತ್ರಿ ಈ ಸಮಸ್ಯೆ ಬಗೆಹರಿದು ಗಣಪತಿ ವಿಸರ್ಜನೆಯಾಗಿದೆ. ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ, ಪ್ರದೀಪ್, ಪುನೇದಹಳ್ಳಿಯ ಗ್ರಾಮಸ್ಥರು ಇದ್ದರು.