ಪಕ್ಷೇತರ ಅಭ್ಯರ್ಥಿ ಕರಾಮತ್ತು ಬಯಲು

7 vikram 5 (Ravi padasalagi)
Published on

ಧಾರವಾಡ: ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿರುವ ರವಿ ಪಡಸಲಗಿ ಸೂಚಕರ ಸಹಿಗಳನ್ನು ನಕಲು ಮಾಡುವ ಮೂಲಕ ಆರಂಭದಲ್ಲೇ ಕರಾಮತ್ತು ಮಾಡಿರುವುದು ಬೆಳಕಿಗೆ ಬಂದಿದೆ.

ರವಿ ಪಡಸಲಗಿ ಕೃತ್ಯದ ಕುರಿತು ಆರೋಪಿಸಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಬೆಂಗಳೂರಿನ ರವಿ ಶಿವಪ್ಪ ಪಡಸಲಗಿ ಅ. 5ರಂದು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಸವಣೂರು ತಾಲೂಕಿನ 10 ಜನರ ಹೆಸರನ್ನು ಸೂಚಕರ ಪಟ್ಟಿಯಲ್ಲಿ ನಮೂದಿಸಿದ್ದರು. ಆದರೆ, ಅವರ ಹೆಸರಿನಲ್ಲಿ ಖೊಟ್ಟಿ ಸಹಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

ನಾಮಪತ್ರ ಸಲ್ಲಿಸಿದ ಬಳಿಕ ಸೂಚಕರು ಮಾಡಿರುವ ಸಹಿ ಹಾಗೂ ಈ 10 ಮತದಾರರ ನೋಂದಣಿ ಕಾಲಕ್ಕೆ ನಮೂನೆ-18ರಲ್ಲಿ ಮಾಡಿದ ಸಹಿಗಳನ್ನು ಪರಿಶೀಲಿಸಿದಾಗ ವ್ಯತ್ಯಾಸ ಕಂಡು ಬಂದಿದೆ. ಎಚ್ಚೆತ್ತ ಸವಣೂರು ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ, ಕಚೇರಿಗೆ ಹಾಜರಾಗುವಂತೆ 10 ಜನರಿಗೆ ಸೂಚಿಸಿದ್ದರು.

ಅ. 6ರಂದು ಕಚೇರಿಗೆ ಆಗಮಿಸಿದ್ದ ಇವರನ್ನು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ಸಮ್ಮುಖದಲ್ಲಿ ವಿಚಾರಣೆ ನಡೆಸಲಾಯಿತು. ರವಿ ಪಡಸಲಗಿ ತಮ್ಮ ಹೆಸರುಗಳನ್ನು ಸೂಚಕರಾಗಿ ನೀಡಿರುವ ಮಾಹಿತಿ ಇಲ್ಲ. ಈ ಅಭ್ಯರ್ಥಿ ನಮಗೆ ಪರಿಚಯವಿಲ್ಲ. ನಮ್ಮ ಸಹಿಗಳನ್ನು ನಕಲು ಮಾಡಿದ್ದಾರೆ. ಹೀಗಾಗಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದಲ್ಲದೆ ಸೂಚಕರ ಪಟ್ಟಿಯಲ್ಲಿರುವ ರಾಜಕುಮಾರ ಕಡ್ಡಿಯವರ, ರಮೇಶ ಭಜಂತ್ರಿ, ನಿಂಗಪ್ಪ ಚಿಗಳ್ಳಿ, ಸುರೇಶ ತಳವಾರ, ರೇಖಾ ಅಗಡಿ, ಬಸವರಾಜ ನಾಗಾವಿ ಹಾಗೂ ತಮ್ಮಣ್ಣ ಶಿವಣ್ಣವರ ಎಂಬುವವರು ಸ್ವಯಂ ದೃಢೀಕರಣ ಪತ್ರವನ್ನೂ ಉಪವಿಭಾಗಾಧಿಕಾರಿಗೆ ನೀಡಿದ್ದಾರೆ.

ಈ ಆಧಾರದ ಮೇಲೆ, 10 ಜನ ಸೂಚಕರ ಸಹಿ ನಕಲು ಮಾಡಿ, ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ವಂಚನೆ ಮಾಡಿದ್ದಾರೆ ಎಂದು ಸವಣೂರು ಪೊಲೀಸ್

ಠಾಣೆಯಲ್ಲಿ ರವಿ ಪಡಸಲಗಿ ಮೇಲೆ ಉಪವಿಭಾಗಾಧಿಕಾರಿ ಕಚೇರಿಯ ಗೆಜೆಟೆಡ್ ಅಧಿಕಾರಿ ಮಂಗಳವಾರ ದೂರು ಸಲ್ಲಿಸಿದ್ದಾರೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net