

ಗುಂಡ್ಲುಪೇಟೆ: ಮಾನವನ ಬದುಕಿಗೆ ಹಾಗೂ ಸಮತೋಲನ ಪರಿಸರಕ್ಕೆ ಪಕ್ಷಿಗಳು ಅತ್ಯವಶ್ಯಕ ಎಂದು ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ. ಮಧು ಹೇಳಿದರು.
ತಾಲೂಕಿನ ತೆರಕಣಾಂಬಿ ಗ್ರಾಮದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪಕ್ಷಿ ತಜ್ಞ ಸಲೀಂ ಅಲಿ ಅವರ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪಕ್ಷಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅತಿಯಾದ ವಿಷ ಸಿಂಪಡಣೆಯಿಂದ ಪಕ್ಷಿಗಳು ವಿನಾಶವಾಗುತ್ತಿವೆ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಭಾರಿ ಸಾಹಸ ಮಾಡುತ್ತಿವೆ. ಮಂಗೋಲಿಯದಿಂದ ಪಟ್ಟೆತಲೆ ಬಾತು ಸುಮಾರು 6 ಸಾವಿರ ಕಿಲೋ ಮೀಟರ್ ಕ್ರಮಿಸಿ ಹಿಮಾಲಯದತ್ತ ಹಾರಿ ಬರುತ್ತವೆ. ರೆಡ್ನಾಟ್ ಹಕ್ಕಿಗಳು ವಲಸೆ ಸಮಯದಲ್ಲಿ ಏಡಿಗಳು ಮೊಟ್ಟೆ ಇರುವ ತಾಣವನ್ನೇ ಆಯ್ದುಕೊಳ್ಳುತ್ತವೆ. ಬಂಡೀಪುರಕ್ಕೆ ಬರುವ ಪಿಟ್ಟ, ಥ್ರಶ್ ಹಕ್ಕಿಗಳ ವಲಸೆ ಬರುತ್ತವೆ. ವಿನಾಶದಂಚಿನಲ್ಲಿರುವ ಪಕ್ಷಿಗಳ ರಕ್ಷಣೆಗೆ ನಮ್ಮಲ್ಲಿ ಆದಿಚುಂಚನಗಿರಿ ನವಿಲುಧಾಮ ಹಾಗೂ ರಾಮನಗರದ ರಣಹದ್ದಿನ ವನ್ಯಜೀವಿಧಾಮಗಳಿವೆ. ಸಲೀಂ ಅಲಿ ಅವರು ಹಳದಿ ಕೊಕ್ಕಿನ ಗುಬ್ಬಿಯನ್ನು ಕರ್ನಾಟಕದ ಕಾಡುಗಳಲ್ಲಿ ಮೊದಲು ನೋಡಿದವರು, ನಂತರ ಪಕ್ಷಿಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡರು ಎಂದು ವಿವರಿಸಿ ತಾವೇ ಸೆರೆಹಿಡಿದಿದ್ದ ಪಕ್ಷಿಗಳ ಚಿತ್ರಗಳನ್ನು ಪ್ರದರ್ಶಿಸಿದರು.
ಶಿಕ್ಷಕ ನಂಜುಂಡ ಸ್ವಾಮಿ ಮಾತನಾಡಿ, ಹಕ್ಕಿಗಳು ಪರಿಸರದ ಮುಖ್ಯಅಂಗವಾಗಿದ್ದು ಅವುಗಳನ್ನು ಮುಂದಿನ ಜನಾಂಗಕ್ಕೆ ಉಳಿಯುವಂತೆ ಮಾಡಲು ವಿದ್ಯಾರ್ಥಿಗಳು ಈಗಿನಿಂದಲೇ ಮುಂದಾಗಬೇಕಾಗಿದೆ ಎಂದು ಹೇಳಿದರು. ಪ್ರಾಂಶುಪಾಲ ಮಹದೇವ ಪ್ರಸಾದ್, ಸಹಶಿಕ್ಷಕರು, ಶಾಲೆ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಇದ್ದರು.