ಪಕ್ಷಿಗಳ 24 ಮರಿಗಳನ್ನು ಕೊಂದಿರುವ ಆರೋಪಿ ಸೆರೆ

17
Published on

ಮೈಸೂರು: ಮೈಸೂರು ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಬೆಳ್ಳಕ್ಕಿ(ಈಗ್ರೇಟ್) ಮತ್ತು ಕಾರ್ಮೋರೆಂಟ್ ಪಕ್ಷಿಗಳ 24 ಮರಿಗಳನ್ನು ಕೊಂದಿರುವ ಆರೋಪಿಯನ್ನು ಬಂಧಿಸಲಾಗಿದೆ.


ಗ್ರಾಮದ ದೇವಣ್ಣ ಎಂಬುವರ ಪುತ್ರ ರವಿ ಬಂಧಿತ ಆರೋಪಿ. ಗ್ರಾಮದ ಅರಳಿಕಟ್ಟೆಯ ಮರದಲ್ಲಿ ಕಾರ್ಮೋರೆಂಟ್, ಬೆಳ್ಳಕ್ಕಿ ಪಕ್ಷಿಗಳು ಗೂಡು ಕಟ್ಟಿ ಮರಿ ಮಾಡಿದ್ದವು. ಆರೋಪಿ ರವಿ ಹುಕ್ಕು, ಕೊಕ್ಕೆ ಬಳಸಿ ಅರಳಿಮರದ ಮೇಲಿದ್ದ ಈ ಪಕ್ಷಿಗಳ ಗೂಡನ್ನು ಕಿತ್ತು ಹಾಕಿದ್ದಾನೆ. ಈ ವೇಳೆ ತಾಯಿ ಪಕ್ಷಿಗಳು ಗಾಬರಿಯಿಂದ ಗೂಡಿನಿಂದ ಹಾರಿವೆ. ಆದರೆ, ಅವುಗಳ ಮರಿಗಳು ಕೊಕ್ಕೆಯೊಂದಿಗೆ ಮರದ ಮೇಲಿಂದ ನೆಲಕ್ಕೆ ಬಿದ್ದು ಮೃತಪಟ್ಟಿವೆ.


ವಿಷಯ ತಿಳಿದು ಅರಣ್ಯ ಸಿಬ್ಬಂದಿ ಆಗಮಿಸುವಷ್ಟರಲ್ಲೇ 24 ಮರಿಗಳು ಸತ್ತಿದ್ದವು. ಮರಿಗಳ ತಾಯಿ ಪಕ್ಷಿಗಳು ರೋದಿಸುತ್ತ ಆಗಸದಲ್ಲೇ ಹಾರಾಡುತ್ತಿದ್ದವು. 7 ಮರಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದು, ನಗರದ ಪೀಪಲ್ಸ್ ಫಾರ್ ಅನಿಮಲ್ಸ್ ಸಂಸ್ಥೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ಆರೋಪಿಯ ವಿಚಾರಣೆ ನಡೆಸಿದ್ದು, ಮರದಲ್ಲಿ ಗೂಡು ಕಟ್ಟಿದ್ದ ಪಕ್ಷಿಗಳು ಪಿಕ್ಕೆ(ಹಿಕ್ಕೆ) ಹಾಕುತ್ತಿದ್ದರಿಂದ ಗೂಡನ್ನು ಕಿತ್ತು ಹಾಕಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕಾರ್ಯಾಚರಣೆಯಲ್ಲಿ ಆರ್‌ಎಫ್‌ಒ ಸುರೇಂದ್ರ, ಡಿಆರ್‌ಎಫ್‌ಒ ಮೋಹನ್ ಕುಮಾರ್, ಗಸ್ತು ಪಾಲಕ ರಾಜೇಗೌಡ, ಚಾಲಕ ಗಣೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net