

ಚಾಮರಾಜನಗರ : ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾನುವಾರ ಗುಂಡ್ಲುಪೇಟೆ ತಾಲೂಕಿನ ಪಾರ್ವತಿ ಬೆಟ್ಟದಲ್ಲಿ ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ, ದಿಗ್ವಿಜಯ ಸುದ್ದಿವಾಹಿನಿ ಹಾಗೂ ಗುಂಡ್ಲು ಪರಿಸರ ಬಳಗದ ಸಹಯೋಗದಲ್ಲಿ ಆಯೋಜಿದ್ದ ಪಕ್ಷಿ ವೀಕ್ಷಣೆ ಹಾಗೂ ಚಿತ್ರರಚನಾ ಸ್ಪರ್ಧೆಗೆ ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿ ಸಂಭ್ರಮಿಸಿದರು.
ಮುಂಜಾನೆ 6.30ಕ್ಕೆ ಆಯೋಜಿಸಿದ್ದ ಪಕ್ಷಿ ವೀಕ್ಷಣೆ ಹಾಗೂ ಚಿತ್ರರಚನಾ ಸ್ಪರ್ಧೆಗೆ 30 ವಿದ್ಯಾರ್ಥಿಗಳು ನೋಂದಾಯಿಸಿದ್ದರೂ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಶಾಲೆಗಳ ಒಂದನೇ ತರಗತಿಯಿಂದ 10 ನೇ ತರಗತಿವರೆಗಿನ 83 ಮಕ್ಕಳು ಹಾಗೂ 60 ಪಾಲಕರು ಆಗಮಿಸಿದ್ದರು.
ಪರಿಸರವಾದಿ ಶ್ರೀಕಂಠ ನೇತೃತ್ವದಲ್ಲಿ ಪಕ್ಷಿಗಳ ವೀಕ್ಷಣೆ, ಶಬ್ದದಿಂದಲೇ ಗುರುತಿಸುವಿಕೆ, ಅರಣ್ಯ ಹಾಗೂ ಗುಡ್ಡಗಾಡಿನ ಮರಗಿಡಗಳ ನಡುವೆ ಪರಿಸರ ನಡಿಗೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಎಲ್ಲ ಮಕ್ಕಳೂ ತಮಗೆ ನೀಡಿದ್ದ ಕೈಪಿಡಿ ಹಾಗೂ ಚಾರ್ಟ್ ಹಿಡಿದು ಕಣ್ಣಿಗೆ ಕಂಡ ಪಕ್ಷಿಗಳನ್ನು ಗುರುತಿಸಿ ಸಂತಸಪಟ್ಟರು.
ಗುಂಡ್ಲು ಪರಿಸರ ಬಳಗದ ಅಧ್ಯಕ್ಷ ಪತ್ರಕರ್ತ ಮಹೇಶ್ ಮಡಹಳ್ಳಿ ಮಾತನಾಡಿ, ಪರಿಸರ ಸಂರಕ್ಷಣೆ ಬಗ್ಗೆ ಎಲ್ಲರೂ ಕಾಳಜಿ ವಹಿಸಬೇಕಾಗಿದೆ. ನಾವು ಅರಿತೋ, ಅರಿಯದೆಯೋ ಪರಿಸರಕ್ಕೆ ಹಾನಿಯಾಗುವ ಯಾವುದೇ ಕೆಲಸವನ್ನೂ ಇನ್ನು ಮುಂದೆ ಕೈಬಿಡುವ ಬಗ್ಗೆ ಸಂಕಲ್ಪ ಮಾಡಬೇಕಾಗಿದೆ ಎಂದು ಹೇಳಿದರು.
ಗುಂಡ್ಲು ಪರಿಸರ ಬಳಗದ ಸಂಚಾಲಕ ನಾಗಾರ್ಜುನ ಕುಮಾರ್ ಮಾತನಾಡಿ, ಮಾನವನ ಉಳಿವಿಗೆ ನಮ್ಮ ಪರಿಸರವನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕಾದ ಅಗತ್ಯವಿದೆ. ತಾಲೂಕಿನ ಅಸ್ಮಿತೆಯಾಗಿದ್ದ ಗುಂಡ್ಲು ನದಿ ಬತ್ತಿಹೋಗಿದ್ದರಿಂದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಸಮಸ್ಯೆ ಎದುರಿಸಬೇಕಾಗಿದೆ. ಆದ್ದರಿಂದ ಬಳಗವು ಗುಂಡ್ಲು ನದಿ ಪುನಶ್ಚೇತನಕ್ಕೆ ಪೂರಕವಾದ ಚಟುವಟಿಕೆ ಕೈಗೊಂಡು ವಿನಾಶದಲ್ಲಿದ್ದ ಚಿಕ್ಕಕೆರೆ ಅಭಿವೃದ್ಧಿ ಸೇರಿದಂತೆ ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ ಬೆಳೆಸಲು ಅಗತ್ಯವಾದ ನಾನಾ ಕಾರ್ಯಗಳನ್ನು ಕೈಗೊಳ್ಳುತ್ತಿದೆ ಎಂದು ಹೇಳಿದರು.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು ಮಾತನಾಡಿ, ಮರಗಳನ್ನು ಕಡಿದ ಪರಿಣಾಮ ಪ್ರಾಣಿ ಪಕ್ಷಿಗಳ ಜತೆಗೆ ವಿಶ್ವವೇ ವಿನಾಶದತ್ತ ಸಾಗುತ್ತಿದೆ. ಭಾರತದಲ್ಲಿ ಪರಿಸರ ದಿನಕ್ಕಾಗಿ 1700 ರಲ್ಲೇ ಮೊದಲ ಹೋರಾಟ ಮಾಡಿದ್ದ ಬಿಷ್ಣೋಯಿ ಜನಾಂಗದ ಅಮೃತಾದೇವಿ, ಮರ ಕಡಿಯಲು ಬಂದ ರಾಜನ ಸೈನಿಕರ ವಿರುದ್ಧ ಹೋರಾಟ ನಡೆಸಿದ್ದರು. 363 ವೀರ ಮಹಿಳೆಯರು ಮರಗಳನ್ನು ಅಪ್ಪಿಕೊಂಡು ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ಹೋರಾಟ ಮಾಡಿದ್ದರು. ಆಧುನಿಕ ಜಗತ್ತಿನಲ್ಲಿ ಪ್ಲಾಸ್ಟಿಕ್ ಪಿಡುಗಿನಿಂದ ಮಾನವರು ಮಾತ್ರವಲ್ಲದೆ, ವನ್ಯಿಜೀವಿಗಳೂ ಜೀವ ಬಿಡುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಮನೆಗಳ ಮುಂದೆ ಹಿತ್ತಲು, ಜಮೀನುಗಳಲ್ಲಿ ಸಸಿ ನೆಟ್ಟು ಬೆಳೆಸುವ ಜತೆಗೆ ಮನೆಗಳಲ್ಲಿಯೂ ಸಣ್ಣ ಸಣ್ಣ ಗಿಡಗಳನ್ನು ಬೆಳೆಸಬೇಕು ಎಂದು ಹೇಳಿದರು.
ವೀಕ್ಷಣೆ ವೇಳೆ ಕಂಡ ಪಕ್ಷಿಗಳು : ಕೊಳದ ಬಕ (ಪಾಂಡ್ ಹೆರಾನ್), ಬೆಳ್ಳಕ್ಕಿ(ಇಗ್ರೆಟ್), ನೀಲಿ ಮಿಂಚುಳ್ಳಿ(ಕಾಮನ್ ಕಿಂಗ್ ಫಿಷರ್), ಚಿಟ್ಟು ಮಡಿವಾಳ(ಇಂಡಿಯನ್ ರಾಬಿನ್), ಕಳ್ಳಿಪೀರ(ಬ್ಲೂ ಟೇಳ್ಡ್ ಗ್ರೀನ್ ಬೀ ಈಟರ್), ಚೋರೆಹಕ್ಕಿ(ಲಾಫಿಂಗ್ ಡವ್), ಕಪ್ಪು ಕಾಜಾಣ(ಬ್ಲ್ಯಾಕ್ ಡ್ರೋಂಗೊ), ಗೊರವಂಕ(ಕಾಮನ್ ಮೈನಾ), ಬೈತಲೆ ಕಬ್ಬಕ್ಕಿ(ಬ್ರಾಹ್ಮಿಣಿ ಸ್ಟಾಲಿರ್ಂಗ್), ಕಪ್ಪು ಬಿಳಿ ಸಿಪಿಳೆ(ಪೈಡ್ ವ್ಯಾಗ್ಟೇಲ್), ಉಯಿಲಕ್ಕಿ(ವಾರ್ಬ್ಲರ್), ಮಧುರಕಂಠ(ಕಾಮನ್ ಐಯೊರ), ಚೇಕಡಿ ಹಕ್ಕಿ(ಸಿನಾರಿಯಸ್ ಟಿಟ್), ಗುಳುಮುಳುಕ(ಲಿಟ್ಲ್ ಗ್ರೀಬ್) ಕಂಡುಬಂದವು.
ಸಸಿ ನೆಟ್ಟರು, ಖುಷಿ ಪಟ್ಟರು: ಅರಣ್ಯ ಇಲಾಖೆ ವತಿಯಿಂದ ನೀಡಲಾದ ವಿವಿಧ ಜಾತಿಯ 50 ಸಸಿಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಗುಡ್ಡದಲ್ಲಿ ನೆಟ್ಟು ನೀರೆರೆದು ಖುಷಿಪಟ್ಟರು. ಗುಂಡ್ಲುಪೇಟೆ ಬಫರ್ ವಲಯದ ಆರ್‌ಎಫ್‌ಒ ಎನ್.ಪಿ.ನವೀನ್ ಕುಮಾರ್ ಮಾತನಾಡಿ, ನಮ್ಮ ಪೂರ್ವಿಕರು ನೆಟ್ಟ ಗಿಡಗಳು ಮರಗಳಾಗಿ ನೆರಳು, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುತ್ತಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಸಸಿ ನೆಟ್ಟು ಬೆಳೆಸುವ ಪರಿಪಾಠ ಕಡಿಮೆಯಾಗಿದ್ದು, ಪರಿಸರ ನಾಶಕ್ಕೆ ಕಾರಣವಾಗುತ್ತಿದೆ. ಬಂಡೀಪುರ ಸಮೀಪದಲ್ಲಿದ್ದರೂ ಹೆಚ್ಚಿನವರಿಗೆ ಇದರ ಮಹತ್ವದ ಅರಿವಿಲ್ಲದಂತಾಗಿದೆ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಿದ್ದು, ಇದರ ಬಗ್ಗೆ ಹೆಚ್ಚಿನ ಅರಿವು ಮೂಡಿಸಲಾಗುತ್ತಿದೆ. ಅರಣ್ಯ ಇಲಾಖೆಯು ಶಾಲಾ ವಿದ್ಯಾರ್ಥಿಗಳಿಗೆ ಅರಣ್ಯದಲ್ಲಿ ಉಚಿತವಾಗಿ ಸಫಾರಿ ಹಾಗೂ ಪರಿಸರದ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಿದೆ. ಪ್ರತಿಯೊಬ್ಬರೂ ತಮ್ಮ ಮಕ್ಕಳ ಹುಟ್ಟುಹಬ್ಬದಂದು ಸಸಿನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆ ನೀಡಬೇಕು ಎಂದು ಹೇಳಿದರು.
ಬಹುಮಾನ ಪಡೆದವರು:
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಕಲಾವಿದಾ ಶಕ್ತಿಪ್ರಸಾದ್ ತೀರ್ಪುಗಾರರಾಗಿ ಭಾಗವಹಿಸಿದ್ದರು.
ಚಿತ್ರಕಲಾ ಸ್ಪರ್ಧೆಯಲ್ಲಿ ವಿನಾಯಕ ಕಾನ್ವೆಂಟಿನ ಸಹನಾ ಮೊದಲನೇ ಬಹುಮಾನ (5 ಸಾವಿರ ರೂ. ನಗದು), ನಿರ್ಮಲಾ ಇಂಗ್ಲಿಷ್ ಮಾಧ್ಯಮ ಶಾಲೆಯ ಮಹದೇವ್ ಎರಡನೇ ಬಹುಮಾನ (3 ಸಾವಿರ ರೂ.ನಗದು), ಮದ್ದಾನೇಶ್ವರ ಪಬ್ಲಿಕ್ ಶಾಲೆಯ ಸಂಸ್ಕೃತಿ ಮೂರನೇ ಬಹುಮಾನ ( 2 ಸಾವಿರ ರೂ. ನಗದು) ಹಾಗೂ ಕಿರಿಯರ ವಿಭಾಗದಲ್ಲಿ ಪುನರ್ವ ನಾಲ್ಕನೇ ಬಹುಮಾನ (2 ಸಾವಿರ ರೂ.) ಪಡೆದುಕೊಂಡರು. ಎಲ್ಲ ಸ್ಪರ್ಧಿಗಳಿಗೂ ಪ್ರಮಾಣಪತ್ರ ನೀಡಲಾಯಿತು.
ಎಲ್ಲ ಮಕ್ಕಳು ಹಾಗೂ ಪಾಲಕರಿಗೆ ಬೆಳಗ್ಗೆ ಇಡ್ಲಿ ಹಾಗೂ ರೈಸ್ ಬಾತ್, ಕುಡಿಯಲು ಶುದ್ಧ ನೀರು, ಚಿತ್ರ ಬರೆಯಲು ಅಗತ್ಯವಾದ ಡ್ರಾಯಿಂಗ್ ಪೇಪರ್ ನೀಡಲಾಯಿತು. ಗುಂಡ್ಲು ಪುನಶ್ಚೇತನ ಸಮಿತಿಯ ಅಧ್ಯಕ್ಷ ಮಡಹಳ್ಳಿ ಮಹೇಶ್, ಗೌರವಾಧ್ಯಕ್ಷ ಕೆ.ಎನ್.ಮಹದೇವಸ್ವಾಮಿ, ನಿರ್ದೇಶಕರಾದ ವಿ.ನಾ.ಚಿದಾನಂದಸ್ವಾಮಿ, ಶಂಕರನಾರಾಯಣ ಜೋಯಿಸ್, ಸಚಿನ್ ಸೇರಿದಂತೆ ಹಲವರು ಇದ್ದರು.