

ನುಗ್ಗೇಹಳ್ಳಿ: ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಮುಂಬರುವ ವಿಧಾನಸಭಾ ಚುನಾವಣೆಗೆ ಹೆಚ್ಚು ಆಕಾಂಕ್ಷಿಗಳಿದ್ದು, ಯಾರೇ ಅಭ್ಯರ್ಥಿ ಆದರೂ ಪಕ್ಷದ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿದ್ದೇವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜತ್ತೇನಹಳ್ಳಿ ರಾಮಚಂದ್ರು ತಿಳಿಸಿದರು.
ಹೋಬಳಿ ಕೇಂದ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಬುಧವಾರ ರಾತ್ರಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಅಲೆ ಪ್ರಾರಂಭವಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದ ಅವರು, ತಾಲೂಕಿನಲ್ಲಿ ಗ್ರಾಮ ಪಂಚಾಯಿತಿಗಳು ಸೇರಿದಂತೆ ಅನೇಕ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಈ ಬಗ್ಗೆ ಕ್ಷೇತ್ರದ ಶಾಸಕರು ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಮಾತನಾಡಿ, ಸಿದ್ದರಾಮಯ್ಯ ಅವರ 5 ವರ್ಷಗಳ ಆಡಳಿತ ರಾಜ್ಯದ ಹಾಗೂ ಕ್ಷೇತ್ರದ ಜನರ ಮನಸ್ಸಿನಲ್ಲಿದ್ದು, ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಖಚಿತ ಎಂದರು.
ಸಮಾರಂಭದಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಂ.ಶಂಕರ್, ಜಿ.ಪಂ.ಮಾಜಿ ಸದಸ್ಯ ಎನ್.ಡಿ. ಕಿಶೋರ್, ಯುವ ಮುಖಂಡ ಲಲಿತಾರಾಘವ್ ದೀಪು, ಮುಖಂಡರಾದ ಹೂವಿನಹಳ್ಳಿ ಜಯರಾಮ್, ಎನ್.ಎಸ್. ಲಕ್ಷ್ಮಣ್,ಎಚ್.ಜೆ. ಕಿರಣ್, ಗೌಡಕಿ ಮಂಜು, ನಟೇಶ್ ಎನ್.ಡಿ. ಗೌತಮ್, ಬಾಣನಕೆರೆ ಅಶೋಕ್, ಸಮೀಉಲ್ಲಾ ಖಾನ್ ಬಸವನಪುರ ಬಾಬು ಹಾಜರಿದ್ದರು.