

ಕಲಬುರಗಿ: ಜಿಲ್ಲೆಯಲ್ಲಿ ಜಾತ್ಯಾತೀತ ಜನತಾ ಪಕ್ಷದ ಕಾರ್ಯಚಟುವಟಿಕೆಗಳನ್ನು ಸಕ್ರೀಯಗೊಳಿಸಲು ಶ್ರಮಿಸುತ್ತಿದ್ದು, ನೂತನ ಪದಾಧಿಕಾರಿಗಳನ್ನು ನೇಮಿಸಲಾಗಿದೆ. ಅದರಂತೆ ಜ.೨ರಂದು ಜಿಲ್ಲಾಧ್ಯಕ್ಷ ಬಾಲರಾಜ ಗುತ್ತೇದಾರ್ ಅವರ ಜನ್ಮದಿನ, ಪಕ್ಷದ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡುವ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಮಹಾ ಪ್ರಧಾನ ಕಾರ್ಯದರ್ಶಿ ಬಸವರಾಜ ಬಿರಬಿಟ್ಟಿ ತಿಳಿಸಿದರು.
ಪಕ್ಷದ ಕಚೇರಿಯಲ್ಲಿ ನೂತನ ಕೊಳವೆ ಬಾವಿ ಉದ್ಘಾಟನೆ, ೪೩ ಸಸಿಗಳನ್ನು ನೆಡುವ ಜತೆಗೆ ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲೆಯ ಒಂಬತ್ತು ಕ್ಷೇತ್ರಗಳಲ್ಲಿ ಸಂಚರಿಸಿ, ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲೆಯಲ್ಲಿ ಪಕ್ಷವೂ ಗತವೈಭವ ಮರುಕಳಿಸಬೇಕಿದೆ. ಸಕ್ರೀಯ ಕಾರ್ಯಕರ್ತರು ಮನೆಯಲ್ಲಿದ್ದು, ಬೇರೆ ಪಕ್ಷಕ್ಕೆ ಹೋಗಿಲ್ಲ. ಅವರೆಲ್ಲರು ಪಕ್ಷಕ್ಕೆ ಮರಳಿ ಬರಬೇಕೆಂದು ವಿನಂತಿಸಲಾಗುವುದು. ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಪಕ್ಷವನ್ನು ಸಕ್ರೀಯಗೊಳಿಸಲು ಹಳೇ ಕಾರ್ಯಕರ್ತರು ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಜ.೨ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪಕ್ಷದ ಎಲ್ಲರೂ ಸಕ್ರೀಯವಾಗಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಶಾಮರಾವ ಸೂರನ್, ಮಲ್ಲಿಕಾರ್ಜುನ ಸಂಗಾಣಿ, ರಾಮಚಂದ್ರ ಅಟ್ಟೂರ, ಮಹಾಂತಪ್ಪ ಮದರಿ, ನಾಗೇಶ ಹೆಬ್ಬಾಳ, ಬಸವರಾಜ ಸಿದ್ರಾಮಗೋಳ, ರಾಜಾಪಟೇಲ್, ಪ್ರವೀಣ ಜಾಧವ್ ಇತರರಿದ್ದರು.