ಪಕ್ಷ ಸೇರ್ಪಡೆಗೆ ಜಾತಕ ಪರೀಕ್ಷೆ ಸಾಧ್ಯವಿಲ್ಲ: ಪ್ರತಾಪಸಿಂಹ

Prathap Simha
Published on

ಮೈಸೂರು: ಪಕ್ಷ ಸೇರ್ಪಡೆಗೆ ಸಾವಿರಾರು ಜನರು ಬರುತ್ತಾರೆ. ಎಲ್ಲರ ಕುಂಡಲಿ, ಜಾತಕ ತೆಗೆದುಕೊಂಡು ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ರೌಡಿಶೀಟರ್ ಪಕ್ಷ ಸೇರ್ಪಡೆ ಕುರಿತು ಸಂಸದ ಪ್ರತಾಪಸಿಂಹ ಪ್ರತಿಕ್ರಿಯಿಸಿದರು.
ರೌಡಿಶೀಟರ್ ಬೆತ್ತನಗೆರೆ ಶಂಕರ್ ಜತೆಗಿನ ಫೋಟೋ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಅಪ್ಪಣ್ಣ ಅವರು ಎಚ್.ಡಿ.ಕೋಟೆ ಭಾಗದಲ್ಲಿ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಂಡರು. ನನ್ನ ಕ್ಷೇತ್ರ ವ್ಯಾಪ್ತಿಗೆ ಬಾರದಿದ್ದರೂ ಪಕ್ಷ ಹೇಳಿದ ಕಾರಣಕ್ಕೆ ಆಗ ಮೈಸೂರು ಬಿಜೆಪಿ ಕಚೇರಿಗೆ ಹೋಗಿದ್ದಾಗ ಶಾಲು ಹಾಕಿ ಪಕ್ಷಕ್ಕೆ ಸ್ವಾಗತ ಮಾಡಿದ್ದೆ. ಆದರೆ, ಬೆತ್ತನೆಗೆರೆ ಶಂಕರ್ ಬಗ್ಗೆ ನನಗೆ ಗೊತ್ತಿಲ್ಲ ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೆ ಸಾವಿರಾರು ಜನರು ಬರುತ್ತಾರೆ. ಅವರೆಲ್ಲರ ಕುಂಡಲಿ, ಜಾತಕ ತೆಗೆದುಕೊಂಡು ನಾನು ಪರೀಕ್ಷೆ ಮಾಡಲು ಸಾಧ್ಯವಿಲ್ಲ. ನಾನು ಪಕ್ಷಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿಲ್ಲ ಎಂದರು.
ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಕಾಲ ಹೋಗಿದೆ. ಆದರೂ ಕಾಂಗ್ರೆಸ್‌ನವರು ಅನಗತ್ಯವಾಗಿ ರೌಡಿಶೀಟರ್ ಎಂದು ಬಿಂಬಿಸಲಾಗುತ್ತಿದೆ. ಅಯಿಲ್ ಕುಮಾರ್, ಕೊತ್ವಾಲ್ ರಾಮಚಂದ್ರ, ಜಯರಾಜ್ ಸೇರಿದಂತೆ ಇನ್ನಿತರ ರೌಡಿಗಳನ್ನು ಇಟ್ಟುಕೊಂಡು ರಾಜಕಾರಣ ಮಾಡಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ವಾಗ್ದಾಳಿ ನಡೆಸಿದರು.
ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಸದೆಬಡಿದು ಅವರ ಬಾಯಿ ಮುಚ್ಚಿಸಿದ್ದೇವೆ. ಇಂತಹ ಬಿಜೆಪಿಗೆ ರೌಡಿಗಳ ಅವಶ್ಯಕತೆ ಇಲ್ಲ. ಮೋದಿ ಕಾಲದಲ್ಲಿ ಭಯೋತ್ಪಾದಕರನ್ನೇ ಬಿಟ್ಟಲ್ಲ, ಇನ್ನು ನಮ್ಮನ್ನು ಬಿಡುತ್ತಾರಾ ಎಂದು ರೌಡಿಗಳು ಭಯಗೊಂಡಿದ್ದಾರೆ ಎಂದು ಹೇಳಿದರು.
ರೌಡಿಗಳಿಗೆ ಮನಪರಿವರ್ತನೆಯಾಗಿ ಸಮಾಜಸೇವೆಗೆ ಬರುತ್ತಿದ್ದಾರೆ. ಬಿಜೆಪಿ ಗಟ್ಟಿಯಾದ ನಾಯಕತ್ವ ಕೊಟ್ಟಿದೆ. ಎಷ್ಟೋ ಜನ ಸಮಾಜ ಕಟ್ಟುವಲ್ಲಿ ಕೈ ಜೋಡಿಸಿದ್ದಾರೆ. ಇದನ್ನೇ ದೊಡ್ಡ ವಿಚಾರ ಮಾಡುವ ಅಗತ್ಯವಿಲ್ಲ ಎಂದರು.
ಅಭಿವೃದ್ಧಿ ರಾಜಕಾರಣ ಮಾಡುವ ನನಗೆ ರೌಡಿಗಳ ಅವಶ್ಯಕತೆ ಇಲ್ಲ. ಎಲ್ಲರನ್ನೂ ಹೆದರಿಸುವ ಶಕ್ತಿ ನನಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ನಾನು ಜಿಲ್ಲೆಯಲ್ಲಿ ಸ್ಪರ್ಧೆ ಮಾಡಿ ಗೆದ್ದು ಬಂದಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net