ಪಕ್ಷ ಸಂಘಟನೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಿ

mysore
Published on

ಮೈಸೂರು: ಕಾಂಗ್ರೆಸ್‌ನ ಮಹಿಳಾ ಸದಸ್ಯರು ಪಕ್ಷ ಸಂಘಟನೆಗೆ ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಮೈಸೂರು ಗ್ರಾಮಾಂತರ ಮಹಿಳಾ ಕಾಂಗ್ರೆಸ್ ಉಸ್ತುವಾರಿ ನೀತಾ ಶೈಲಾ ಡಿಸೋಜಾ ಹೇಳಿದರು.

ನಗರದ ಪಕ್ಷದ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಗ್ರಾಮಾಂತರ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷವು ಮಹಿಳಾ ಘಟಕವನ್ನು ಗಂಭೀರವಾಗಿ ಪರಿಗಣಿಸಿದ್ದು, ದೇಶಾದ್ಯಂತ ಮಹಿಳೆಯರನ್ನು ಪಕ್ಷ ಸಂಘಟನೆಗೆ ಸಕ್ರಿಯಗೊಳಿಸಲಾಗುತ್ತಿದೆ.

ಮುಂದಿನ ಚುನಾವಣೆಗಳಲ್ಲಿ ಪಕ್ಷಕ್ಕೆ ಶಕ್ತಿ ತುಂಬಬೇಕಾಗಿದೆ. ಅದಕ್ಕಾಗಿ ಬೂತ್ ಅಭಿಯಾನ, ಹೊಸ ಸದಸ್ಯತ್ವ ಅಭಿಯಾನ, ಮಹಿಳಾ ಗ್ಯಾರಂಟಿ ಅಭಿಯಾನ, ಹೊಸ ಪದಾಧಿಕಾರಿಗಳಿಗೆ ಅವಕಾಶ, ಸಕ್ರಿಯವಲ್ಲದ ಪದಾಧಿಕಾರಿಗಳಿಗೆ ಬದಲಿ ವ್ಯವಸ್ಥೆ...ಹೀಗೆ ಇನ್ನಷ್ಟು ಹೊಸ ಆಲೋಚನೆ ಮೂಲಕ ಸಂಘಟಿಸಲಾಗುತ್ತಿದೆ. ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಅನ್ನು ಇನ್ನಷ್ಟು ಸನ್ನದ್ಧಗೊಳಿಸಲು ಹೊಸ ಕಾರ್ಯಸೂಚಿ ಜಾರಿಗೆ ತರಲಾಗುವುದು ಎಂದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ಅವರು ಮೈಸೂರಿನಲ್ಲಿ ಸಮಾವೇಶ ಮಾಡುವ ಸಿದ್ಧತೆ ಮಾಡಿಕೊಂಡಿದ್ದಾರೆ. ಅದನ್ನು ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿ, ಮುಂಬರುವ ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಬಹುಪಾಲು ಮಹಿಳೆಯರ ಪಾತ್ರವೇ ಹೆಚ್ಚಿದೆ ಎಂದರು.

ಪಕ್ಷದ್ರೋಹಿ ಚಟುವಟಿಕೆ ಸಹಿಸುವುದಿಲ್ಲ. ಅಂತಹವರ ವಿರುದ್ಧ ಶಿಸ್ತು ಕ್ರಮಕ್ಕೆ ಹಿಂಜರಿಯುವುದಿಲ್ಲ. ಬಿಜೆಪಿಯ ಗೂಢಾಚಾರಿಕೆ ತಂಡ ಚಾಲ್ತಿಯಲ್ಲಿದ್ದು, ನಮ್ಮ ಚಟುವಟಿಕೆಯನ್ನು ಸದಾ ಗಮನಿಸುತ್ತಿದೆ ಹೀಗಾಗಿ ನಾವು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳಾ ಕಾಂಗ್ರೆಸ್ ಸಂಘಟನೆಗೆ ಒತ್ತು ಕೊಟ್ಟಿದ್ದು, ಅತಿ ಹೆಚ್ಚು ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ತಿಳಿಸಿದರು.

ಮಹಿಳಾ ಪದಾಧಿಕಾರಿಗಳಾದ ಸುಧಾ ಮಹದೇವಯ್ಯ, ಶೋಭಾ, ಸುಶೀಲಾ ನಂಜಪ್ಪ, ಮಲ್ಲಳ್ಳಿ ಪುಷ್ಪ್ಪಾ, ವಿಜಯಲಕ್ಷ್ಮೀ, ಮನೋನ್ಮಣಿ, ತನುಜಾ ಮಹೇಶ್, ಕೋಮಲಾ, ಮಂಜುಳಾ, ಮಹಾದೇವಮ್ಮ, ಮಾಯಮ್ಮ, ಅಂಜು ಫಾತಿಮಾ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net