ಪಕ್ಷ ಸಂಘಟನೆಗೆ ಕೆ.ಎಚ್.‌ಮುನಿಯಪ್ಪ ಮುನ್ನುಡಿ ; ಕರೊನಾ ನೆಪದಡಿ ಜನ ಸಂಪರ್ಕ, ಬೂತ್ ಕಮಿಟಿ ರಚನೆಗೆ ತಯಾರಿ

KH Muniyappa
Published on

| ಪಾ.ಶ್ರೀ.ಅನಂತರಾಮ್ ಕೋಲಾರ 

ಕರೊನಾದಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಾಂತ್ವನ, ಸಹಾಯದ ಜತೆಗೆ ಡೆತ್ ಆಡಿಟ್ ನಡೆಸುವ ಮೂಲಕ ಪಕ್ಷ ಜನರ ಪರ ಇದೆ ಎಂಬುದನ್ನು ಬಿಂಬಿಸಿಕೊಳ್ಳಲು ಅಭಿಯಾನ ಕೈಗೆತ್ತಿಕೊಂಡಿರುವ ಎಐಸಿಸಿ ವಿಶೇಷ ಆಹ್ವಾನಿತ ಸದಸ್ಯ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಪಕ್ಷಕ್ಕೆ ಲಾಭ ಮಾಡಿಕೊಡಲು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಕಾರಕ್ಕೆ ಬರಬೇಕಾದಲ್ಲಿ ಸಂಘಟನೆಗೆ ಒತ್ತು ನೀಡಬೇಕಾಗಿದೆ. ಕರೊನಾ ವಿಷಯದಲ್ಲಿ ಸರ್ಕಾರ ಎಸಗಿರುವ ಲೋಪವನ್ನು ಜನರಿಗೆ ಮನದಟ್ಟು ಮಾಡುವುದು, ಬಡವರ ಪರ ಪಕ್ಷ ನಡೆಸುತ್ತಿರುವ ಹೋರಾಟಕ್ಕೆ ಜನಬೆಂಬಲ ಪಡೆಯುವ ಸಲುವಾಗಿ ವಿಶೇಷ ಅಭಿಯಾನ ನಡೆಸುವುದು ಸೂಕ್ತವೆಂಬ ಮುನಿಯಪ್ಪ ಅವರ ಅಭಿಪ್ರಾಯಕ್ಕೆ ರಾಹುಲ್ ಗಾಂಧಿ ಸಮ್ಮತಿಸಿ, ಸಂಘಟನೆಗೆ ಹಸಿರು ನಿಶಾನೆ ತೋರಿರುವುದರಿಂದ ತವರು ಕ್ಷೇತ್ರದಿಂದಲೇ ಪ್ರವಾಸ ಕೈಗೊಂಡಿದ್ದಾರೆ ಎನ್ನಲಾಗಿದೆ.

ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸತತವಾಗಿ ಸೋಲು ಕಾಣುತ್ತಿದ್ದು, ಇಲ್ಲಿಂದಲೇ ಪಕ್ಷ ಬಲಪಡಿಸಬೇಕೆಂಬ ಆಶಯದೊಂದಿಗೆ ಕಸಬಾ ಹೋಬಳಿಯಿಂದ ಪ್ರವಾಸ ಆರಂಭಿಸಿ, ಸದಸ್ಯತ್ವ ನೋಂದಣಿ ಜತೆಗೆ ಬೂತ್ ಮಟ್ಟದ ಸಮಿತಿ ರಚನೆಗೆ ಮುನ್ನುಡಿ ಬರೆದಿದ್ದು, ಆಷಾಢ ಕಳೆದ ಬಳಿಕ ಹೋಬಳಿವಾರು ಕಾರ್ಯಕರ್ತರ ಸಮಾವೇಶ ಆಯೋಜಿಸಿ ಕೋಲಾರ ಕ್ಷೇತ್ರದಲ್ಲಿ ಪಕ್ಷಕ್ಕೆ ಭದ್ರಬುನಾದಿ ಹಾಕಲು ನೀಲಿನಕ್ಷೆ ಸಿದ್ಧಪಡಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಕಾಂಗ್ರೆಸ್ ಶಾಸಕರು ಇರುವ ಕಡೆ ಸಂಟನೆಗೆ ಸಮಸ್ಯೆ ಆಗಲಾರದು, ಕೋಲಾರ ಮತ್ತು ಮುಳಬಾಗಿಲಿನಲ್ಲಿ ಪಕ್ಷಕ್ಕೆ ದೊಡ್ಡ ಹೊಡೆತ ಬಿದ್ದಿರುವುದರಿಂದ ಈ ಎರಡೂ ಕಡೆ ಹೆಚ್ಚಿನ ಗಮನಹರಿಸಲು ಮುನಿಯಪ್ಪ ನಿರ್ಧರಿಸಿದ್ದು, ಒಂದು ವೇಳೆ ಪಕ್ಷ ಅನುಮತಿ ನೀಡಿದಲ್ಲಿ ಮುಂದಿನ ವಿಧಾನಸಭಾ ಚುನಾವಣೆಗೆ ಈ ಎರಡೂ ಕ್ಷೇತ್ರಗಳ ಪೈಕಿ ಒಂದರಲ್ಲಿ ಸ್ಪರ‌್ಸಲು ತಳಪಾಯ ಗಟ್ಟಿಪಡಿಸುವುದಕ್ಕೂ ತಂತ್ರಗಾರಿಕೆ ಹೆಣೆಯುತ್ತಿದ್ದಾರೆಂದು ಮುನಿಯಪ್ಪ ಆಪ್ತರಿಂದ ತಿಳಿದುಬಂದಿದೆ.

28 ವರ್ಷಗಳ ರಾಷ್ಟ ರಾಜಕಾರಣದಲ್ಲಿದ್ದು ಅನೇಕ ಹುದ್ದೆಗಳನ್ನು ಅಲಂಕರಿಸಿರುವ ಮುನಿಯಪ್ಪ ಅವರನ್ನು ರಾಜ್ಯದಲ್ಲಿ ಪಕ್ಷವನ್ನು ಅಕಾರಕ್ಕೆ ತರಲು ಶ್ರಮಿಸುವಂತೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪ್ರೇರೇಪಿಸಿದ್ದಾರೆ. ರಾಜ್ಯದಲ್ಲಿ ಪಕ್ಷಕ್ಕೆ ಬಹುಮತ ಸಿಕ್ಕಿದಲ್ಲಿ, ದಲಿತ ಸಿಎಂಗೆ ಬೇಡಿಕೆ ಹೆಚ್ಚಾದಲ್ಲಿ ಮುನಿಯಪ್ಪ ಅವರಿಗೆ ಹೆಚ್ಚಿನ ಆದ್ಯತೆ ನೀಡುವ ಬಗ್ಗೆಯೂ ಚರ್ಚೆ ನಡೆದಿದೆ, ಈ ಸುಳಿವು ಅರಿತಿರುವುದರಿಂದಲೇ ಸಂಘಟನೆಗೆ ಗಮನಹರಿಸಿದ್ದಾರೆ ಎಂದು ಅಪ್ತರು ಹೇಳಿಕೊಂಡಿದ್ದಾರೆ.

ಕರೊನಾ ನಿಯಂತ್ರಣ ವಿಚಾರದಲ್ಲಿ ಬಿಜೆಪಿ ನೇತತ್ವದ ಸರ್ಕಾರ ಸಾಕಷ್ಟು ಎಡವಿರುವುದು ಕಾಂಗ್ರೆಸ್ಸಿಗೆ ಮುಂದಿನ ಚುನಾವಣೆಯಲ್ಲಿ ಗೆಲ್ಲುವುದಕ್ಕೆ ದಾರಿ ವಾಡಿಕೊಟ್ಟಿದೆ, ಜೆಡಿಎಸ್ ಸದ್ಯಕ್ಕೆ ತನ್ನ ಅನುಕೂಲಕ್ಕಾಗಿ ಬಿಜೆಪಿ ಬಗ್ಗೆ ಮೃಧು ಧೋರಣೆ ಅನುಸರಿಸುತ್ತಿದ್ದರೂ ಮುಂದಿನ ದಿನಗಳಲ್ಲಿ ಈ ಪಕ್ಷದ ನಡೆಯಲ್ಲಿ ಬದಲಾವಣೆ ಕಾಣಬಹುದಾಗಿದೆ. ಒಂದು ವೇಳೆ ಕೆ.ಎಚ್.ಮುನಿಯಪ್ಪ ಸಿಎಂ ರೇಸ್‌ನಲ್ಲಿ ಕಾಣಿಸಿಕೊಂಡರೆ ಜೆಡಿಎಸ್ ಬೆಂಬಲ ಪಡೆಯುವುದು ಸುಲಭವಾಗಬಹುದು, ಸದ್ಯಕ್ಕೆ ಬೂತ್ ಮಟ್ಟದಲ್ಲಿ ಪಕ್ಷ ಬಲವರ್ಧನೆ, ಕರೊನಾ ಹೆಸರಲ್ಲಿ ಸರ್ಕಾರದ ವಿರುದ್ಧ ಜನರಲ್ಲಿ ಜಾಗೃತಿ ಹಾಗೂ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ರಾಜ್ಯಾದ್ಯಂತ ಪ್ರವಾಸ ಮಾಡುವುದು ಮುನಿಯಪ್ಪನವರ ಗುರಿಯಾಗಿದೆ ಎಂಬುದು ಆಪ್ತರ ವಾದವಾಗಿದೆ.

ಪಕ್ಷದ ವರಿಷ್ಠರ ಆದೇಶದಂತೆ ರಾಜ್ಯದಲ್ಲಿ ಪಕ್ಷವನ್ನು ಅಕಾರಕ್ಕೆ ತರಲು ಪ್ರಯತ್ನ ಮಾಡುತ್ತಿರುವೆ. ಪಕ್ಷಕ್ಕೆ ಬಹುಮತ ಸಿಗಬೇಕಾದರೆ ಮೊದಲು ನನ್ನ ಎರಡೂ ಜಿಲ್ಲೆಯಲ್ಲಿ ಕನಿಷ್ಠ 10 ಸ್ಥಾನ ಗೆಲ್ಲಬೇಕು, ಹಾಗಾಗಿ ಮೊದಲು ಕೋಲಾರದಲ್ಲಿ ಪಕ್ಷಕ್ಕೆ ಬಲ ತುಂಬುವುದು ನನ್ನ ಆದ್ಯತೆಯಾಗಿದೆ. ಸಿಎಂ ವಿಚಾರ ಚರ್ಚೆ ಈಗ ಸೂಕ್ತವಲ್ಲ, ಬಹುಮತ ಸಿಕ್ಕಿದ ಮೇಲೆ ಪಕ್ಷದ ವರಿಷ್ಠರು ಯಾರು ಸಿಎಂ ಆಗಬೇಕೆಂದು ನಿರ್ಧರಿಸುತ್ತಾರೆ, ನಮ್ಮಲ್ಲಿ ಎಲ್ಲರಿಗೂ ಸಿಎಂ ಆಗುವ ಆಸೆ, ಅರ್ಹತೆ ಇದೆ. ಆದರೆ ಅಂತಿಮ ನಿರ್ಧಾರ ಶಾಸಕಾಂಗ ಪಕ್ಷ ಹಾಗೂ ವರಿಷ್ಠರು ತೆಗೆದುಕೊಳ್ಳುತ್ತಾರೆ, ನನ್ನಂತೂ ಎಲ್ಲಿಯೂ ಬಹಿರಂಗವಾಗಿ ಸಿಎಂ ಆಗುವೆ ಎಂದು ಹೇಳಿಕೊಂಡಿಲ್ಲ. ಕೆ.ಎಚ್.ಮುನಿಯಪ್ಪ, ಎಐಸಿಸಿ ವಿಶೇಷ ಆಹ್ವಾನಿತ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net