ಪಕ್ಷ ವಿರೋಧಿಗಳನ್ನು ಉಚ್ಚಾಟಿಸಿ

Vinay godemane
Published on

ಚಿತ್ರದುರ್ಗ: ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕಾಂಗ್ರೆಸ್ಸಿನಿಂದ ಉಚ್ಚಾಟಿಸಬೇಕು. ನಿಗಮ-ಮಂಡಳಿಗಳಲ್ಲಿ ನಿಷ್ಠಾವಂತರಿಗೆ ಅವಕಾಶ ಕಲ್ಪಿಸಬೇಕು ಎಂದು ಎನ್‌ಎಸ್‌ಯುಐನ ಮಾಜಿ ಅಧ್ಯಕ್ಷ ವಿನಯ್ ಗೋಡೆಮನೆ ಕೆಪಿಸಿಸಿ, ಎಐಸಿಸಿಗೆ ಒತ್ತಾಯಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ವೇಳೆ ಹೊಳಲ್ಕೆರೆ ಕ್ಷೇತ್ರದಲ್ಲಿ ಜಿಪಂ ಮಾಜಿ ಸದಸ್ಯೆ ಸವಿತಾ ರಘು ಸೇರಿ ಅನೇಕರು ಪಕ್ಷ ವಿರೋಧಿ ಚಟುವಟಿಯಲ್ಲಿ ತೊಡಗಿಸಿಕೊಂಡಿದ್ದರು. ಈ ಸಂಬಂಧ ಕೆಪಿಸಿಸಿಗೆ ಸಾಕ್ಷಾೃಧಾರ ಸಮೇತ ದೂರು ಸಲ್ಲಿಸಲಾಗಿದೆ ಎಂದರು.

ಚುನಾವಣಾ ಸಂದರ್ಭಗಳಲ್ಲಿ ಅನ್ಯ ಪಕ್ಷದವರೊಂದಿಗೆ ಶಾಮೀಲಾಗಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರನ್ನು ಉಚ್ಚಾಟಿಸದಿದ್ದರೆ ನಿಷ್ಠಾವಂತರಲ್ಲಿ ಭ್ರಮನಿರಸವಾಗಲಿದೆ. ಆದ್ದರಿಂದ ಕೂಡಲೇ ಇಂತಹವರನ್ನು ಪಕ್ಷದಿಂದ ಹೊರಹಾಕಬೇಕು ಎಂದು ಆಗ್ರಹಿಸಿದರು.

ಪಕ್ಷದ ವಿವಿಧ ಘಟಕಗಳಿಗೆ ಅಧ್ಯಕ್ಷರ ನೇಮಕ ಮಾಡುವಾಗ ಶಾಸಕರು, ಸಚಿವರು, ಜಿಲ್ಲಾಧ್ಯಕ್ಷರ ಅಭಿಪ್ರಾಯವನ್ನು ಕೆಪಿಸಿಸಿಗೆ ಕಳುಹಿಸುವುದು ಸಾಮಾನ್ಯ. ಆದರೆ, ಇದನ್ನು ಪರಿಗಣಿಸದೆ ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ದಿಢೀರ್ ಎಂದು ಬೇರೆಯವರನ್ನು ನೇಮಕ ಮಾಡಲಾಗಿದೆ. ಈ ಕುರಿತು ಕೆಪಿಸಿಸಿ ಅಧ್ಯಕ್ಷರಿಗೆ ದೂರು ನೀಡಲಾಗಿದೆ. ಈಚೆಗೆ ಕೆಲವರು ತಮಗೆ ಬೇಕಾದವರಿಗೆ ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸಲು ಪ್ರಯತ್ನ ನಡೆಸುತ್ತಿರುವುದು ಸರಿಯಲ್ಲ ಎಂದರು.

ಕಾನೂನು ಸಲಹೆಗಾರ ಸಚ್ಚಿನ್ ಬಾಬು, ಯುವ ಮುಖಂಡರಾದ ಚೇತನ, ಕಿರಣ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net