ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ಧ : ಎಸ್.ಎ. ರಾಮದಾಸ್

mla s.a. ramdas
Published on

ಮೈಸೂರು: ಪಕ್ಷ ಯಾವುದೇ ಜವಾಬ್ದಾರಿ ಕೊಟ್ಟರೂ ನಿಭಾಯಿಸಲು ಸಿದ್ದನಿದ್ದೇನೆ ಎಂದು ಶಾಸಕ ಎಸ್.ಎ.ರಾಮದಾಸ್ ಹೇಳಿದರು.

ಕೃಷ್ಣರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ನಂ.53ರಲ್ಲಿ ಹಮ್ಮಿಕೊಂಡಿರುವ ಯೋಗಕ್ಷೇಮಯಾತ್ರೆ ಪ್ರಯುಕ್ತ ಆಲನಹಳ್ಳಿ ಬಡಾವಣೆಯ ಶ್ರೀ ವಿನಾಯಕ ದೇವಸ್ಥಾನದಲ್ಲಿ ಗೋಮಾತೆಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜಾತಿ, ಧರ್ಮ ಮೀರಿ ಈ ಕ್ಷೇತ್ರದ ಜನ ನನ್ನನ್ನು ಮನೆ ಮಗನಂತೆ ಕಂಡಿದ್ದಾರೆ, ಆಶೀರ್ವದಿಸಿದ್ದಾರೆ. ಅದರಂತೆಯೇ ನಾನು ಶಾಸಕನಾಗಿದ್ದ ಅಷ್ಟೂ ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ತೃಪ್ತಿ ಇದೆ. ಆದ್ದರಿಂದ ಮುಂದೆಯೂ ಕೂಡ ಪಕ್ಷ ವಹಿಸಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದರು.

1994ರಿಂದ ಇಲ್ಲಿಯವರೆಗೆ ನನಗೆ ಟಿಕೆಟ್ ಕೊಡಿ ಎಂದು ಕೇಳಲಿಲ್ಲ, ಒತ್ತಡವನ್ನೂ ಹಾಕಲಿಲ್ಲ. ಆದರೂ ಪಕ್ಷ ನನಗೆ ಟಿಕೆಟ್ ನೀಡಿ ಗೌರವಿಸಿದೆ. ಅದನ್ನು ಮನಃಪೂರ್ವಕವಾಗಿ ನಿರ್ವಹಣೆ ಮಾಡಿದ್ದೇನೆ. ಮುಂಬರುವ ಚುನಾವಣೆಯಲ್ಲೂ ನಾನು ಟಿಕೆಟ್ ಕೊಡಿ ಎಂದು ಕೇಳುವುದಿಲ್ಲ, ಪಕ್ಷದ ನಿಯಮಕ್ಕೆ ಬದ್ದನಾಗಿರುತ್ತೇನೆ ಎಂದು ಹೇಳಿದರು.

ಕಳೆದ ಐದು ವರ್ಷಗಳಲ್ಲಿ ನಡೆಯುತ್ತಿರುವ ಐದನೇ ಯೋಗಕ್ಷೇಮ ಯಾತ್ರೆ ಇದಾಗಿದೆ. ಜನರ ಕಷ್ಟಗಳಿಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಈ ಕಾರ್ಯಕ್ರಮ ರೂಪಿಸಲಾಗಿದೆ. ಎಲ್ಲರ ಸಹಕಾರದ ಫಲವಾಗಿ 53ನೇ ವಾರ್ಡಿಗೆ ನದಿ ಮೂಲದಿಂದ ನೀರು ನೀಡಲಾಗುತ್ತಿದ್ದು, ವಾರ್ಡ್‌ಅನ್ನು ಬೋರ್‌ವೆಲ್ ಮುಕ್ತವನ್ನಾಗಿ ಮಾಡಿದ್ದೇನೆ ಎಂದರು.

ಮಳೆಗಾಲದಲ್ಲಿ ವಾರ್ಡಿನ ಹಲವೆಡೆ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು, ಇದೀಗ ಆ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಹತ್ತು ಹಲವು ಯೋಜನೆಗಳನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡಲಾಗಿದೆ. ಸಮಸ್ಯೆಗೆ ಸ್ಥಳದಲ್ಲೇ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳನ್ನೂ ಜತೆಯಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿಸಿದರು. ಈ ವೇಳೆ ಉಪಮೇಯರ್ ಡಾ. ಜಿ. ರೂಪಾ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net