ತುಮಕೂರು: ರಾಜ್ಯ ಹಾಗೂ ಜಿಲ್ಲಾ ಬಿಜೆಪಿ ಕೆಲವು ನಾಯಕರ ಮೇಲೆ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಬಿಜೆಪಿ ತೊರೆಯುವ ವದಂತಿಯನ್ನು ಅಲ್ಲಗಳೆದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. "ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತೇನೆ ಎಂಬುದು ಕೇವಲ ಊಹಾಪೋಹ, ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಹೋರಾಟದಲ್ಲಿ ಭಾಗವಹಿಸುವಂತೆ ಕೆಲವರು ಬಂದು ಮಾತನಾಡಿದರು. ನನಗೆ ಅಧಿಕಾರ ಇರುವವರೆಗೂ ಜಿಲ್ಲೆಗೆ ಯಾವ ರೀತಿಯಿಂದಲೂ ಅನ್ಯಾಯವಾಗಲು ಬಿಡದಂತೆ ನ್ಯಾಯ ಕೊಟ್ಟಿದ್ದೇನೆ' ಎಂದು ಪೋಸ್ಟ್ ಮಾಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದರು ಎಂದು ಜಿಲ್ಲಾ ಬಿಜೆಪಿಯಿಂದ ದೂರು ನೀಡಲಾಗಿರುವ ಹಿನ್ನೆಲೆಯಲ್ಲಿ ಕೋಪಗೊಂಡಿರುವ ಜೆ.ಸಿ.ಮಾಧುಸ್ವಾಮಿ, ಪಕ್ಷದ ಚಟುವಟಿಕೆಗಳಿಂದ ದೂರವಿದ್ದಾರೆ ಎನ್ನಲಾಗಿದೆ. ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಅಮಿತ್ ಷಾ ಸೂಚನೆ ಮೇರೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಚಾರ ನಡೆಸಿದ್ದು, ಪಕ್ಷ ವಿರೋಧ ಚಟುವಟಿಕೆ
ಎಂದು ಹೇಗೆ ಪತ್ರ ಬರೆದಿದ್ದಾರೆ ಎಂದು ಆಪ್ತರ ಬಳಿ ಹೇಳಿಕೊಂಡಿರುವ ಮಾಧುಸ್ವಾಮಿ ಬಿಜೆಪಿ ಬಿಡುವ ಯಾವುದೇ ಪ್ರಸ್ತಾಪವಿಲ್ಲ ಎನ್ನಲಾಗಿದೆ.