

ಹಾಸನ: ಕಾಂಗ್ರೆಸ್ ಪಕ್ಷದಲ್ಲಿ ಹಲವು ವರ್ಷಗಳಿಂದ ಸಾಮಾನ್ಯ ಕಾರ್ಯಕರ್ತನಾಗಿ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದ ನನ್ನ ಬಗ್ಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ದಲಿತ ಎಂಬ ಕಾರಣಕ್ಕೆ ನನ್ನನ್ನು ಅವಮಾನಿಸುತ್ತಿದ್ದಾರೆ ಎಂದು ಹುಡಾ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಕೃಷ್ಣಕುಮಾರ್ ಅಳಲು ತೋಡಿಕೊಂಡರು.
ನಾನು ವಿದ್ಯಾರ್ಥಿ ಆಗಿದ್ದ ದಿನದಿಂದಲೂ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಹಲವು ಚುನಾವಣೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇತ್ತೀಚೆಗೆ ಹಾಸನ ಕ್ಷೇತ್ರದ ಶಾಸಕ ಪ್ರೀತಂ ಗೌಡ ಅವರು ಸೌಹಾರ್ದಯುತವಾಗಿ ನಮ್ಮ ಮನೆಗೆ ಭೇಟಿ ನೀಡಿದ್ದರು. ಇದನ್ನೇ ಅಪರಾಧ ಎಂಬಂತೆ ಸಾಮಾಜಿಕ ಜಾಲತಾಣದಲ್ಲಿ ನನ್ನ ತೇಜೋವಧೆ ಮಾಡಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಾಂಗ್ರೆಸ್‌ಗೂ ಮತ್ತು ಕೆಪಿಸಿಸಿಗೂ ದೂರು ನೀಡಿದ್ದೇನೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಹೆಚ್.ಸಿ.ಮಹದೇವಪ್ಪ ಮತ್ತು ಎ.ಮಂಜು ಅವರು ಸಚಿವರಾಗಿದ್ದ ಸಂದರ್ಭದಲ್ಲಿ ದಲಿತರಿಗೆ ಹುಡಾ ಅಧ್ಯಕ್ಷ ಸ್ಥಾನ ನೀಡಬೇಕೆಂದು ವರಿಷ್ಠರಿಗೆ ಒತ್ತಡ ಹಾಕಿ ನನಗೆ ಅವಕಾಶ ಮಾಡಿಕೊಟ್ಟರು. ಅಂದಿನಿಂದಲೂ ಪಕ್ಷದೊಳಗೆ ಕೆಲವರು ನನಗೆ ಸಾಕಷ್ಟು ಅಪಮಾನ ಮಾಡಿದ್ದಾರೆ. ದಲಿತನೊಬ್ಬ ಮುಂಚೂಣಿಗೆ ಬರುತ್ತಾನೆಂದು ನಮ್ಮ ಪಕ್ಷದವರೆ ನನ್ನ ಬೆಳವಣಿಗೆ ಸಹಿಸದೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ದೂರಿದರು.
ಹುಡಾ ಅಧ್ಯಕ್ಷನಾಗಿದ್ದ ಸಂದರ್ಭದಲ್ಲೂ ಕಾಂಗ್ರೆಸ್ ಮುಖಂಡರಾದ ಹೆಚ್.ಕೆ.ಮಹೇಶ್, ರಘು ದಾಸರಕೊಪ್ಪಲು, ಅರಕಲಗೂಡಿನ ಪ್ರಸನ್ನ ಇವರು ನನ್ನ ವಿರುದ್ಧ ಪ್ರತಿಭಟನೆಗಳನ್ನು ಮಾಡಿಸಿದ್ದರು. ನನ್ನ ಅಧಿಕಾರದ ಅವಧಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕಿ ಬಾರದಂತೆ, ಪಕ್ಷಕ್ಕೆ ಯಾವುದೇ ಚ್ಯುತಿ ತಾರದಂತೆ ಕೆಲಸ ಮಾಡಿದ್ದೇನೆ. ಆದರೂ ಕೂಡ ನನಗೆ ಮಾನಸಿಕವಾಗಿ ನೋವುಂಟು ಮಾಡುತ್ತಿರುವುದರಿಂದ ಇನ್ನೂ 2-3 ದಿನಗಳಲ್ಲಿ ನನ್ನ ಬೆಂಬಲಿಗರ ಸಭೆ ಕರೆದು ನನ್ನ ಮುಂದಿನ ನಿರ್ಣಯವನ್ನು ತಿಳಿಸುತ್ತೇನೆ ಎಂದು ಹೇಳಿದರು.
ಶಾಸಕ ಪ್ರೀತಂಗೌಡ ಅವರು ನನ್ನ ಮನೆಗೆ ಬಂದಿದ್ದು ನಿಜ. ಅವರು ನನ್ನನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಆದರೆ ನಾನು ಸಮ್ಮತಿಸಿಲ್ಲ. ಈಗಲೂ ಕೂಡ ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷನಾಗಿದ್ದೇನೆ. ಆದರೆ ಇವರ ಕಿರುಕುಳವನ್ನು ಸಹಿಸಲಾಗದೆ ಅಂಬೇಡ್ಕರ್ ಅವರ ಮಾತಿನಂತೆ ಸ್ವಾಭಿಮಾನಕ್ಕೆ ಧಕ್ಕೆ ಬಂದ ಸ್ಥಳದಲ್ಲಿ ಇರಬಾರದು ಎಂಬಂತೆ ನಾನು ನನ್ನ ಮುಂದಿನ ನಡೆಯನ್ನು ಕೆಲವೇ ದಿನಗಳಲ್ಲಿ ತಿಳಿಸುತ್ತೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹರಳಹಳ್ಳಿ ಗ್ರಾಪಂ ಸದಸ್ಯ ರಂಗಪ್ಪ, ಮೀನಾಕ್ಷಿ ಕುಮಾರ್, ಪ್ರೀತು ಸೇರಿದಂತೆ ಇತರರು ಇದ್ದರು.