

ಹಾಸನ: ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ್ದಾರೆ ಎನ್ನಲಾದ ವಿಡಿಯೋವನ್ನು ತನಿಖೆಗೆ ಕಳುಹಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಬಂದ ಕೂಡಲೇ ಸತ್ಯಾಸತ್ಯತೆ ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದರು.
ನಗರದ ಬೂವನಹಳ್ಳಿ ಹೆಲಿಪ್ಯಾಡ್‌ನಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜಕೀಯವಾಗಿ ಆರೋಪ ಮಾಡುತ್ತಿದ್ದಾರೆ. ಅವರು ದೇಶಭಕ್ತರಾದರೆ ನಾವು ದೇಶಭಕ್ತರಲ್ಲವಾ? ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟವರು ಯಾರು ಎಂದು ಪ್ರಶ್ನೆ ಮಾಡಿದರು.
ಬಾಣಾವಾರದಲ್ಲಿ ಸರ್ಕಾರಿ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡಿದರು ಎಂಬ ಆರೋಪಕ್ಕೆ ಪ್ರತಿಯಿಸಿದ ಸಿಎಂ, ಅದನ್ನು ನಾನು ಕಲಿತ್ತದ್ದೇ ಪ್ರಧಾನಿ ಮೋದಿ ಅವರಿಂದ. ಪಾರ್ಲಿಮೆಂಟ್ ನಲ್ಲಿ ಅವರು ರಾಜಕೀಯ ಭಾಷಣ ಮಾಡುತ್ತಾರೆ. ಅವರನ್ನು ನೋಡಿಯೇ ನಾನು ಕಲಿತ್ತದ್ದು ಎಂದರು.
ಬಿಜೆಪಿ, ಜೆಡಿಎಸ್ ಅವಧಿಯಲ್ಲಿ ಆದ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರು ನಮ್ಮ ಅವಧಿಯಲ್ಲಿ ನಡೆದ ಕಾಮಗಾರಿಗಳನ್ನು ಉದ್ಘಾಟನೆ ಮಾಡಿಲ್ಲವೇ? ಅವರ ಅವಧಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದ ಕಾಮಗಾರಿಗಳನ್ನು ನಾವು ಪೂರ್ಣಗೊಳಿಸಿದ್ದೇವೆ. ಹೀಗಿರುವಾಗ ಬಿಜೆಪಿ, ಜೆಡಿಎಸ್ ನವರನ್ನು ಕರೆದು ಉದ್ಘಾಟನೆ ಮಾಡಿಸಲಾ ಎಂದು ಮರುಪ್ರಶ್ನಿಸಿದರು.
ಜಾತಿ ಜನಗಣತಿ ವರದಿ ಬಗ್ಗೆ ಮಾತನಾಡಿದ ಸಿಎಂ, ವರದಿಯನ್ನು ಸರ್ಕಾರ ಸ್ವೀಕರಿಸಿದೆ. ಅದರಲ್ಲಿ ಏನಿದೆ ಅಂತ ಗೊತ್ತಿಲ್ಲ. ಅದನ್ನು ಕ್ಯಾಬಿನೆಟ್ ಮುಂದೆ ಇರಿಸಿ, ಚರ್ಚಿಸಿ ಪರಿಶೀಲಿಸಲಾಗುವುದು ಎಂದರು.
ಲೋಕಸಭೆ ಚುನಾವಣೆಗೆ ಹಾಸನ ಅಭ್ಯರ್ಥಿಯನ್ನು ಶೀಘ್ರವಾಗಿ ಘೋಷಿಸಲಾಗುವುದು. ನಾವು ಒಗ್ಗಟ್ಟಾಗಿದ್ದೇವೆ ಎಂದರು.