ಪಂಪ್‌ವೆಲ್ ಮೇಲ್ಸೇತುವೆ ನಾಡಿದ್ದು ಉದ್ಘಾಟನೆ ಸಾಧ್ಯತೆ

pumpwell new
Published on

ಮಂಗಳೂರು: ರಾಷ್ಟ್ರೀಯ ಹೆದ್ದಾರಿಯ ಪಂಪ್‌ವೆಲ್ ಫ್ಲೈಓವರ್ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಜ.31ರಂದು ಉದ್ಘಾಟನೆಗೆ ಸಿದ್ಧತೆ ನಡೆದಿದೆ.

ಮೇಲ್ಸೇತುವೆ ಮತ್ತು ಇಕ್ಕೆಲ ಸಂಪರ್ಕ ರಸ್ತೆ ಸಹಿತ ಉಭಯ ಕಡೆಗಳಿಗೆ ವಾಹನ ಚಲಿಸಲು ಅಗತ್ಯ ವ್ಯವಸ್ಥೆ ಪೂರ್ಣಗೊಂಡಿದೆ. ಸೇತುವೆಯುದ್ದಕ್ಕೂ ಇಕ್ಕೆಲ ಎಲ್‌ಇಡಿ ವಿದ್ಯುತ್ ದೀಪ ಅಳವಡಿಸುವ ಕಾಮಗಾರಿ ಮುಗಿದಿದ್ದು, ಸೇತುವೆ ಬದಿಯ ಸುರಕ್ಷತಾ ಕಾಮಗಾರಿಗಳು ನಡೆಯುತ್ತಿವೆ.
ಮುಖ್ಯ ಅತಿಥಿಗಳು ಹಾಗೂ ಸ್ಥಳೀಯ ಸಂಸದರು, ಮುಖಂಡರ ಸಮಯ ಹೊಂದಾಣಿಕೆಯಾದರೆ ಜ.31ರಂದೇ ಉದ್ಘಾಟನೆ ನಡೆಯಬಹುದು. ಇಲ್ಲದಿದ್ದರೆ ಉದ್ಘಾಟನೆ ದಿನ ಸ್ವಲ್ಪ ಬದಲಾವಣೆಯಾಗಬಹುದು ಎಂದು ಅಧಿಕೃತ ಮೂಲ ತಿಳಿಸಿದೆ.

ಡಿಸೆಂಬರ್ ಮಾಸಾಂತ್ಯಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸೇತುವೆಯ ತೊಕ್ಕೊಟ್ಟು ಕಡೆಯ ಭಾಗವನ್ನು ಜನವರಿ 15 ರೊಳಗೆ ಹಾಗೂ ನಂತೂರು ಕಡೆಯ ಭಾಗವನ್ನು ಜನವರಿ 31ರೊಳಗೆ ಮುಕ್ತಾಯಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶಿಶು ಮೋಹನ್ ಮತ್ತು ನವಯುಗ ಸಂಸ್ಥೆಯ ನಿರ್ದೇಶಕ ರಮೇಶ್ ವೈ. ಜಂಟಿ ಸಹಿ ಇರುವ ವಾಗ್ದಾನ ಪತ್ರವನ್ನು ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net