ಪಂಪ್‌ಸೆಟ್‌ಗಳಿಗೆ ಹಗಲಲ್ಲೇ ವಿದ್ಯುತ್ ಪೂರೈಸಿ

JLR ph 2 Aug 19 Protest
Published on

ಜಗಳೂರು: ನೀರಾವರಿ ಪಂಪ್‌ಸೆಟ್‌ಗಳಿಗೆ ರಾತ್ರಿ ಬದಲು ಹಗಲು ಹೊತ್ತಲ್ಲಿ ಏಳು ತಾಸು ವಿದ್ಯುತ್ ನೀಡಬೇಕು ಎಂದು ಆಗ್ರಹಿಸಿ ಶನಿವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ನಂಜುಂಡಸ್ವಾಮಿ ಬಣ) ಪದಾಧಿಕಾರಿಗಳು ಇಲ್ಲಿನ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಬೆಸ್ಕಾಂ ಎಇಇ ಗಿರೀಶ್ ನಾಯ್ಕ ಅವರಿಗೆ ಮನವಿ ಸಲ್ಲಿಸಿದರು.
ಕೃಷಿ ಪಂಪ್‌ಸೆಟ್ ನಂಬಿಕೊಂಡು ಬದುಕುತ್ತಿರುವ ರೈತರು ತುಂಬ ತೊಂದರೆ ಅನುಭವಿಸುತ್ತಿದ್ದಾರೆ. ಈಗಾಗಲೇ ಕೈಕೊಟ್ಟಿರುವ ಮಳೆಯಿಂದ ಬೆಳೆಗಳು ಸಂಪೂರ್ಣ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಕೃಷಿಕರು ಹರಸಾಹಸ ಪಡುತ್ತಿದ್ದಾರೆ. ಇದರ ಜತೆಗೆ ವಿದ್ಯುತ್ ಕಣ್ಣಾಮುಚ್ಚಾಲೆ ಮತ್ತು ರಾತ್ರಿ ವಿದ್ಯುತ್ ಪೂರೈಕೆಯಿಂದ ರೈತರಿಗೆ ನುಂಗಲಾರದ ತುತ್ತಾಗಿದೆ. ರಾತ್ರಿ ವೇಳೆಯಲ್ಲಿ ಕರಡಿ, ಹಂದಿ, ಚಿರತೆ ಸೇರಿದಂತೆ ವಿಷ ಜಂತುಗಳು ಓಡಾಡುತ್ತವೆ. ಜಮೀನುಗಳಲ್ಲಿ ನೀರಾಯಿಸುವಾಗ ಮೈ ಮೇಲೆ ಎರಗಿ ಗಾಯಗೊಳಿಸಿದ ಉದಾಹರಣೆ ಸಾಕಷ್ಟಿವೆ. ಕೆಲವು ರೈತರು ಹಾವು ಕಚ್ಚಿಸಿಕೊಂಡು ಸಾವನ್ನಪ್ಪಿದ್ದಾರೆ. ಆದ್ದರಿಂದ ಏಳು ತಾಸು ಹಗಲಿನಲ್ಲಿಯೇ ಪೂರೈಕೆ ಮಾಡಬೇಕು ಎಂದು ಪ್ರತಿಭಟನಾ ರೈತರು ಒತ್ತಾಯಿಸಿದರು.
ವಿದ್ಯುತ್ ಪೂರೈಕೆಯಲ್ಲಿ ಗುಣಮಟ್ಟತೆ ಕಾಪಾಡುತ್ತಿಲ್ಲ. ಸಣ್ಣ ಮಳೆ ಹನಿ ಬಿದ್ದರೂ ರಾತ್ರಿಯಲ್ಲಾ ವಿದ್ಯುತ್ ತೆಗೆದರೆ ಜನರು ಬದುಕುವುದು ಹೇಗೆ? ಅದರಲ್ಲೂ ಕಾಡಂಚಿನಲ್ಲಿ ಜೀವನ ನಡೆಸುವ ಜನರ ಪರಿಸ್ಥಿತಿ ಕ್ಲಿಷ್ಟಕರವಾಗಿರುತ್ತದೆ. ಆದ್ದರಿಂದ ರಾತ್ರಿಇಡೀ ವಿದ್ಯುತ್ ಬೆಳಕು ಇರಬೇಕು. ಹಗಲಿನಲ್ಲಿ ಕೃಷಿ ಪಂಪ್ ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಾಗಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಕೆ. ಬಸವರಾಜಪ್ಪ, ಪ್ರ.ಕಾರ್ಯದರ್ಶಿ ಲಕ್ಷ್ಮಣ್‌ನಾಯಕ, ಜಂಟಿ ಕಾರ್ಯದರ್ಶಿ ಬಿ.ಕುಮಾರ್, ಗೌರವಾಧ್ಯಕ್ಷ ಗುರುಸಿದ್ದಪ್ಪ, ರೈತ ಮುಖಂಡರಾದ ಪೈಲ್ವಾನ್ ತಿಪ್ಪೇಸ್ವಾಮಿ, ಬಾಲರಾಜ, ತಿಪ್ಪೇಸ್ವಾಮಿ, ವಾಸಣ್ಣ, ಲೋಕೇಶ್, ಪಾಪಯ್ಯ, ಭೀಮರಾಜ, ಮಲ್ಲಯ್ಯ, ಮನ್ಸೂರು ಸೇರಿದಂತೆ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net