

ಚಿತ್ರದುರ್ಗ: ಜಿಲ್ಲೆಯ ಕೃಷಿ ಮಾರ್ಗಗಳ ನೀರಾವರಿ ಪಂಪ್‌ಸೆಟ್‌ಗಳಿಗೆ ನಿರಂತರ 7 ಗಂಟೆ ಗುಣಮಟ್ಟದ ವಿದ್ಯುತ್ ನೀಡುವಂತೆ ಆಗ್ರಹಿಸಿ ರಾಜ್ಯ ರೈತಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿದರು.
ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು. ಬೆಸ್ಕಾಂ ವಿರುದ್ಧ ಧಿಕ್ಕಾರ ಕೂಗಿದರು. ಸಮರ್ಪಕ ವಿದ್ಯುತ್ ಪೂರೈಕೆಗೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿ ಜಿಲ್ಲಾಡಳಿತದ ಮೂಲಕ ಮನವಿ ರವಾನಿಸಿದರು.
ವಿದ್ಯುತ್ ನೀಡಿ ರೊಟ್ಟಿ, ಬುತ್ತಿ ಕೊಡುತ್ತೇವೆ ಎಂದು ತಲೆಯ ಮೇಲೆ ಆಹಾರ ಪದಾರ್ಥ ಹೊತ್ತು ಆಕ್ರೋಶ ಹೊರಹಾಕಿದರು.
ಸಂಘದ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಏಳು ಗಂಟೆ ನಿರಂತರ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದ್ದ ಸರ್ಕಾರ ಯಾವುದೇ ಮುನ್ಸೂಚನೆ ನೀಡದೆ, ಏಕಾಏಕಿ ವಿದ್ಯುತ್ ಕಡಿತಗೊಳಿಸಿದ್ದರಿಂದ ಕೃಷಿಗಾಗಿ ಸಾಲ ಮಾಡಿ, ಬಂಡವಾಳ ಹಾಕಿರುವ ರೈತರು ವಿಷ ಕುಡಿಯುವ ದುಸ್ಥಿತಿ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯಲ್ಲಿ ನಿತ್ಯ 9 ಗಂಟೆ ಕೃಷಿಗೆ ವಿದ್ಯುತ್ ಪೂರೈಸುವ ಮಾಹಿತಿ ಇದ್ದು, ಅಲ್ಲಿ ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.
ಐದು ಗ್ಯಾರಂಟಿಗೆ ಹಣ ಒದಗಿಸಲು ಸರ್ಕಾರಕ್ಕೆ ಆಗುತ್ತಿಲ್ಲ. ರೈತರಿಗೆ ನೀಡಿರುವ ಸಬ್ಸಿಡಿ ಚೆಕ್‌ಗಳು ಹಿಂದಿರುಗುತ್ತಿವೆ. ಸಾವಿರಾರು ಕುಟುಂಬಗಳು ಬೆಳೆ ರಕ್ಷಿಸಿಕೊಳ್ಳಲು ಹರಸಾಹಸ ಪಡುವ ವೇಳೆ ಸಂಜೆ 6ರಿಂದ 10ರಯವರೆಗೆ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದು ಹೀಗೆ ಮುಂದುವರೆದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಜನ ಕಾಂಗ್ರೆಸ್ ಅನ್ನು ತಿರಸ್ಕರಿಸಲಿದ್ದಾರೆ. ಇನ್ನಾದರೂ ಎಚ್ಚೆತ್ತುಕೊಂಡು ಸಮರ್ಪಕ ವಿದ್ಯುತ್ ಪೂರೈಸಲಿ. ಮುಂಗಾರು ವೇಳೆ ಬೆಳೆ ನಾಶವಾದ ರೈತರಿಗೆ ಬರ ಪರಿಹಾರ ನೀಡಲಿ ಎಂದು ಸರ್ಕಾರಕ್ಕೆ ಕೋರಿದರು.
ಮುಖಂಡರಾದ ಕೆ.ಪಿ.ಭೂತಯ್ಯ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಧನಂಜಯ ಹಂಪಯ್ಯನಮಾಳಿಗೆ, ಬಿ.ಒ.ಶಿವಕುಮಾರ್, ಎಂ.ಲಕ್ಷ್ಮ್ಮಿಕಾಂತ್, ಒಪಿಟಿ ಸ್ವಾಮಿ, ಸಿ.ನಾಗರಾಜು ಮುದ್ದಾಪುರ ಇತರರಿದ್ದರು.