ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವಂತೆ ಅಗ್ರಹಿಸಿ ಪ್ರತಿಭಟನೆ

ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವಂತೆ ಅಗ್ರಹಿಸಿ ಪ್ರತಿಭಟನೆ
Published on

ಹಾಸನ: ರೈತರು ತೀವ್ರ ಸಂಕಷ್ಟದಲ್ಲಿದ್ದರೂ ಕೂಡ ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಅವರಿಗೆ ಒಂದಲ್ಲ ಒಂದು ರೀತಿ ತೊಂದರೆ ನೀಡುತ್ತಿದ್ದಾರೆ. ಇದೀಗ ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡುವಂತೆ ಆದೇಶ ಮಾಡಿರುವ ಕ್ರಮವನ್ನು ಖಂಡಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಸೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಗರದ ಸಂತೆಪೇಟೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಂಪ್ ಸೆಟ್‌ಗಳಿಗೆ ಆಧಾರ್ ಲಿಂಕ್ ಮಾಡಿಸಲು ರೈತರ ಜಾಮೀನು ತಂದೆ-ತಾತನಾ ಹೆಸರಿನಲ್ಲಿ ಆರ್.ಆರ್.ನಂಬರ್ ಇದ್ದು, ಇನ್ನು ಸಾವಿರಾರು ರೈತರು ಭೂಮಿಯನ್ನು ಬಗರು ಹುಕುಂ ಸಾಗುವಳಿಯಲ್ಲಿ ಇದ್ದು, ಖಾತೆ ಸೇರಿದಂತೆ ಇನ್ನಿತರೆ ದಾಖಲಾತಿಗಳು ಮಂಜೂರು ಆಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಕೊಳವೆ ಬಾವಿಯನ್ನು ಕೊರೆಸಿದ್ದು, ಇದಕ್ಕೆಲ್ಲ ಆಧಾರ್ ಲಿಂಕ್ ಮಾಡಿಸಲು ರೈತರಿಗೆ ತೊಂದರೆಯಾಗುತ್ತದೆ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು ಎಂದು ಆಗ್ರಹಿಸಿದರು.
ತಮ್ಮ ಬೇಡಿಕೆಯನ್ನು ಈಡೇರಿಸಬೇಕು, ಸರ್ಕಾರ ವಿದ್ಯುತ್ ಇಲಾಖೆಯನ್ನ ಖಾಸಗಿಕರಣ ಮಾಡಲು ಹೊರಟಿದ್ದಾರೆ, ಅದರ ಭಾಗವಾಗಿ ಈಗ ಆಧಾರ್ ಲಿಂಕ್ ಮಾಡುವವರು ಮುಂದಾಗಿದ್ದಾರೆ. ತಕ್ಷಣವೇ ಇದನ್ನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಇದಲ್ಲದೆ ವಿದ್ಯುತ್ ಸರಬರಾಜಿನಲ್ಲಿ ನಗರ ಮತ್ತು ಹಳ್ಳಿ ಎಂಬ ತಾರತಮ್ಯದಲ್ಲಿ ಹಂಚಿಕೆ ಮಾಡಲಾಗುತ್ತಿದೆ. ರೈತರಿಗೆ ಸರಿಯಾದ ರೀತಿಯಲ್ಲಿ ವಿದ್ಯುತ್ ನೀಡದೆ ಇರುವುದರಿಂದ ಅವರು ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ಪದೇ ಪದೇ ಲೋಡ್ ಸೆಡಿಂಗ್ ನೆಪದಲ್ಲಿ ಕರೆಂಟ್ ಕಟ್ ಮಾಡುವ ಮೂಲಕ ರೈತರು ಮತ್ತು ವಿದ್ಯಾರ್ಥಿಗಳಿಗೆ ಸಮಸ್ಯೆಯನ್ನು ಉಂಟು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ತಮ್ಮ ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು. ಈಗಾಗಲೇ ರೈತರು ವರಮಾನವಿಲ್ಲದೆ ಸತ್ತು ಬದುಕುತ್ತಿದ್ದಾರೆ, ಸ್ವಾಮಿನಾಥನ್ ವರದಿಯಂತೆ ರೈತರಿಗೆ ಕನಿಷ್ಠ ವಿದ್ಯುತ್ ಬೆಲೆಯನ್ನು ನಿಗದಿ ಮಾಡಿ ಎಂದು ಸರ್ಕಾರಕ್ಕೆ ವರದಿ ನೀಡಿ 23 ವರ್ಷ ಕಳೆದರೂ ಕೂಡ ಇದುವರೆಗೂ ಅನುಷ್ಠಾನಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಆನೆಕೆರೆ ರವಿ, ಬಾಬು, ನಂಬಿಗನಹಳ್ಳಿ ಕಮಲಮ್ಮ, ಬೋರನಹಳ್ಳಿ ಜಯರಾಮ, ವೆಂಕಟೇಶ್ ಗೌಡ, ಶಿವರಾಮೇಗೌಡ, ಕುಮಾರ್, ವಿಠ್ಠಲ್, ಪವಿತ್ರ, ಸಿದ್ದಪ್ಪ, ಜವರೇಶ, ತಿಮ್ಮೇಗೌಡ, ಮೋಹನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net