

ಕೊಳ್ಳೇಗಾಲ : ಹತ್ತನೇ ಶತಮಾನದ ಕವಿ ಪಂಪ ರಚಿಸಿದ ಆದಿಪುರಾಣ ಹಾಗೂ ವಿಕ್ರಮಾರ್ಜುನ ವಿಜಯ (ಪಂಪಭಾರತ )ಎಂಬ ಎರಡು ಕೃತಿಗಳು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸ್ಥಾನ ಪಡೆದಿವೆ ಎಂದು ನಿವೃತ್ತ ಶಿಕ್ಷಕ ಇದ್ವಾಂಡಿ ಶಿವಣ್ಣ ಹೇಳಿದರು. ಪಟ್ಟಣದ ಸರ್ಕಾರಿ ಆದರ್ಶ ಶಾಲೆಯಲ್ಲಿ ಶುಕ್ರವಾರ ಜೆಎಸ್‌ಬಿ ಪ್ರತಿಷ್ಠಾನ ಆಯೋಜಿಸಿದ್ದ ಕನ್ನಡ ಮಾಸಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರಾಚೀನ ಕನ್ನಡ ಕವಿಗಳಲ್ಲಿ ಪಂಪ ಅಗ್ರಗಣ್ಯ. ಈತ ರಚಿಸಿದ್ದು ಎಂದು ನಮಗೆ ದೊರೆತಿರುವ ಅಧಿಕೃತ ಕೃತಿಗಳು ಎರಡು ಮಾತ್ರ. ಇದಕ್ಕಿಂತಾ ಪೂರ್ವದಲ್ಲಿ ಆತ ರಚಿಸಿದ ಎಲ್ಲ ಕೃತಿಗಳನ್ನೂ ಇವುಗಳು ಮೀರಿಸಿವೆ ಎಂದು ಅನೇಕ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ವಿವರಿಸಿದರು.
ಬಹುಮಾನ ವಿತರಣೆ: ಕಾರ್ಯಕ್ರಮ ನಿಮಿತ್ತ ಶಾಲೆಯಲ್ಲಿ ರಸಪ್ರಶ್ನೆ ಸ್ಪರ್ಧೆವಿಜೇತರಾದ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಶಾಲೆಯ ಎಲ್ಲಾ ಮಕ್ಕಳಿಗೆ ಕನ್ನಡ ಕಿರುಪುಸ್ತಕ ನೀಡಿ ಓದುವ ಹವ್ಯಾಸಕ್ಕೆ ಪ್ರೋತ್ಸಾಹಿಸಲಾಯಿತು.ಜೆಎಸ್‌ಬಿ ಸಂಸ್ಥೆ ಅಧ್ಯಕ್ಷ ಶಶಿಕುಮಾರ್, ಮುಖ್ಯ ಶಿಕ್ಷಕಿ ಪ್ರಿಯದರ್ಶಿನಿ, ಸಹ ಶಿಕ್ಷಕರಾದ ಸವಿತಾ, ಮಹದೇವಯ್ಯ, ಗಿರೀಶ, ಮೇಘಾ, ದೀಪ, ಸುಶ್ಮಾ, ಪಲ್ಲವಿ ಇತರರು ಇದ್ದರು.