ಪಂದ್ಯಾವಳಿ ಗೆದ್ದ ಜಂಪಿಂಗ್ ಸ್ಟಾರ್‌ಗಳು

15rajesh9
Published on

ಚಾಮರಾಜನಗರ: ಗಡಿಜಿಲ್ಲೆ ಚಾಮರಾಜನಗರದಲ್ಲಿ ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ ವಿಭಾಗ) ವತಿಯಿಂದ ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಜಂಪ್ ರೋಪ್ ಪಂದ್ಯಾವಳಿಯಲ್ಲಿ ಚಾಮರಾಜನಗರವನ್ನು ಹೊರತುಪಡಿಸಿ ವಿವಿಧ ಜಿಲ್ಲೆಗಳ ಕ್ರೀಡಾಪಟುಗಳು ಪ್ರಶಸ್ತಿ ಪಡೆದುಕೊಂಡರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಜಂಪ್ ರೋಪ್ ಕ್ರೀಡಾಕೂಟಕ್ಕೆ ಹನೂರು ಶಾಸಕ ಎಂ.ಆರ್.ಮಂಜುನಾಥ್ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಚಾಮರಾಜನಗರದ ಒಬ್ಬ ಕ್ರೀಡಾಪಟು ಕೂಡ ಭಾಗವಹಿಸಿರಲಿಲ್ಲ. ಆದರೇ ಬೀದರ್, ರಾಯಚೂರು, ಕೊಪ್ಪಳ, ಬಳ್ಳಾರಿ, ದಾವಣಗೆರೆ, ಉಡುಪಿ, ಮಂಗಳೂರು, ಮೈಸೂರು, ಬೆಂಗಳೂರು, ವಿಜಯನಗರ, ಚಿಕ್ಕೋಡಿ, ಬೆಳಗಾವಿ ಹಾಗೂ ಇನ್ನಿತರೆ ಸುಮಾರು 20 ಜಿಲ್ಲೆಗಳಿಂದ ಅಂದಾಜು 800-850 ಕ್ರೀಡಾಪಟುಗಳು ಭಾಗಿಯಾಗಿದ್ದರು.

ಕ್ರೀಡಾಕೂಟದಲ್ಲಿ ಒಟ್ಟು 6 ಇವೆಂಟ್‌ಗಳಲ್ಲಿ ಕ್ರೀಡಾಕೂಟ ನಡೆಯಿತು. 30 ಸೆಕೆಂಡ್ ಸ್ಪೀಡ್, ಡಬಲ್ ಅಂಡರ್ 30 ಸೆಕೆಂಡ್ ಸ್ಪೀಡ್, 3 ನಿಮಿಷ ಮತ್ತು ಫ್ರೀ ಸ್ಟೈಲ್ ಎಂಬ 4 ವೈಯಕ್ತಿಕ ವಿಭಾಗ ಹಾಗೂ ಡಬಲ್ ಡಚ್‌ರಿಲೇ ಮತ್ತು ಸ್ಪೀಡ್ 30 ಸೆಕೆಂಡ್ ರಿಲೇ ಎಂಬ 2 ಗುಂಪು ವಿಭಾಗದಲ್ಲಿ ಬಾಲಕರು ಮತ್ತು ಬಾಲಕಿಯರಿಗೆ ಪ್ರತ್ಯೇಕವಾಗಿ ಕ್ರೀಡಾಕೂಟ ನಡೆಯಿತು. ಹೆಣ್ಣುಮಕ್ಕಳ ವಿಭಾಗದ 30 ಸೆಕೆಂಡ್ ಸ್ಪೀಡ್‌ನಲ್ಲಿ ಉಡುಪಿಯ ಸಿಂಚನ ಪ್ರಥಮ, ಮಂಡ್ಯದ ಸಿ.ಪಿ.ಧನುಶ್ರೀ ದ್ವಿತೀಯ ಮತ್ತು ಬೆಂಗಳೂರು ಉತ್ತರದ ಕೃತಿಕಾ ದ್ವಿತೀಯ ಸ್ಥಾನ ಪಡೆದುಕೊಂಡರು.

30 ಸೆಕೆಂಡ್ ಡಬಲ್ ಅಂಡರ್ ವಿಭಾಗದಲ್ಲಿ ಬೆಳಗಾವಿಯ ಆರತಿ ಲಮಾಣಿ ಪ್ರಥಮ, ಕೊಪ್ಪಳದ ಅಂಜುಮ್ ದ್ವಿತೀಯ ಮತ್ತು ಧಾರವಾಡದ ಸ್ಪಂದನಾ ತೃತೀಯ. 3 ನಿಮಿಷದ ಸ್ಪರ್ಧೆಯಲ್ಲಿ ಕೊಪ್ಪಳದ ನಿಶಾ ಅಂಜೂಮ್ ಪ್ರಥಮ, ಬಾಗಲಕೋಟೆಯ ಶ್ರೀದೇವಿ ಪೂಜಾರಿ ದ್ವಿತೀಯ ಮತ್ತು ದಾವಣಗೆರೆ ಆರ್.ಎಸ್.ನಿತ್ಯಶ್ರೀ ತೃತೀಯ. ಸ್ಪೀಡ್ ರಿಲೇ ವಿಭಾಗದಲ್ಲಿ ಬೆಳಗಾವಿ ತಂಡ ಪ್ರಥಮ, ದಕ್ಷಿಣ ಕನ್ನಡ ತಂಡ ದ್ವಿತೀಯ ಮತ್ತು ಕೊಪ್ಪಳ ತಂಡ ತೃತೀಯ. ಡಬಲ್ ಅಂಡರ್ ರಿಲೇಯಲ್ಲಿ ದಕ್ಷಿಣ ಕನ್ನಡ ಪ್ರಥಮ, ಮಂಡ್ಯ ದ್ವಿತೀಯ ಮತ್ತು ಚಿಕ್ಕೋಡಿ ತೃತೀಯ ಸ್ಥಾನಗಳಿಸಿತು.

ಗಂಡು ಮಕ್ಕಳ ವಿಭಾಗದ 30 ಸೆಕೆಂಡ್ ಸ್ಪೀಡ್‌ನಲ್ಲಿ ಚಿಕ್ಕಮಗಳೂರಿನ ಟಿ.ಡಿ.ವಿಖ್ಯಾತ್ ಪ್ರಥಮ, ಯಾದಗಿರಿಯ ಪ್ರಕಾಶ್ ದ್ವಿತೀಯ ಮತ್ತು ಮಂಡ್ಯದ ಕಿರಣ್‌ಗೌಡ ತೃತೀಯ. 30 ಸೆಕೆಂಡ್ ಡಬಲ್ ಅಂಡರ್ ವಿಭಾಗದಲ್ಲಿ ಧಾರವಾಡದ ಅಮೃತ್‌ಕುಮಾರ್ ಪ್ರಥಮ, ಕೊಪ್ಪಳ ಹೇಮಂತ್ ಸಾಯೀ ದ್ವತೀಯ ಮತ್ತು ಮಂಡ್ಯ ಪಿ.ಗಗನ್ ತೃತೀಯ ಸ್ಥಾನ ಪಡೆದರು.

ಜಂಪ್‌ರೋಪ್ ಕ್ರೀಡೆ ಪರಿಚಿತವಾಗಿ 2 ವರ್ಷಗಳಾಗಿವೆ. ಜಿಲ್ಲೆಯಲ್ಲಿ ಈ ಕ್ರೀಡೆಯ ಬಗ್ಗೆ ತರಬೇತಿ ನೀಡುವ ತರಬೇತಿದಾರರು ಇರಲಿಲ್ಲ. ಕೊಪ್ಪಳದಲ್ಲಿ ಜಂಪ್‌ರೋಪ್‌ಗಾಗಿಯೇ ಕ್ರೀಡಾಂಗಣವನ್ನು ನಿರ್ಮಾಣ ಮಾಡಲಾಗಿದ್ದು, ಅಲ್ಲಿಗೆ ಇಬ್ಬರು ದೈಹಿಕ ಶಿಕ್ಷಣ ಶಿಕ್ಷಕರನ್ನು ತರಬೇತಿಗೆ ಕಳುಹಿಸಿ ಮುಂದಿನ ವರ್ಷದಲ್ಲಿ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಭಾಗವಹಿಸುವಂತೆ ಪ್ರಯತ್ನಿಸುತ್ತೇವೆ. ಮಂಜುನಾಥ್ ಪ್ರಸನ್ನ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net